ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಂದ 44 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ

ಬಳ್ಳಾರಿ : ಜಿಲ್ಲೆಯ 100ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸುಮಾರು 44 ಕೋಟಿ ರೂ. ವಿದ್ಯುತ್ ಬಿಲ್‌ಗಳು ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ.
ಈ ಬಾಕಿಯ ಪ್ರಮುಖ ಕಾರಣವಾಗಿ ಜೆಸ್ಕಾಂ ಅಧಿಕಾರಿಗಳಿಂದ ಅವೈಜ್ಞಾನಿಕವಾಗಿ ಬಿಲ್ಲುಗಳನ್ನು ನೀಡಿರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀರಿನ ಘಟಕಗಳು, ಬೀದಿ ದೀಪಗಳು ಮುಂತಾದ ಕಡೆಗಳಲ್ಲಿ ವಿದ್ಯುತ್ ಬಳಕೆಯಾಗುತ್ತಿದ್ದು, ಅಲ್ಲಿ ಮೀಟರ್‌ಗಳನ್ನು ಅಳವಡಿಸದ ಕಾರಣ ಅಂದಾಜಿನ ಆಧಾರದ ಮೇಲೆ ಬಿಲ್ಲುಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು, ಸರಿಯಾದ ಲೆಕ್ಕಪತ್ರದ ಬಿಲ್ಲುಗಳನ್ನು ತರಿಸಲು ಜೆಸ್ಕಾಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಆಗಿದಂತೆಯೇ ಬಾಕಿ ಬಿಲ್ ಪಾವತಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Next Story





