ಸಿರುಗುಪ್ಪ ತಾಲೂಕಿನಲ್ಲಿ ಭಾರೀ ಮಳೆ : ಸಿಡಿಲು ಬಡಿದು 8 ಕುರಿಗಳ ಸಾವು

ಸಿರುಗುಪ್ಪ : ನಗರ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಹಾಗೂ ಶುಕ್ರವಾರ ಬೆಳಗಿನ ಜಾವ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ತಾಲೂಕಿನ ಕೆಂಚನಗುಡ್ಡ ಗ್ರಾಮದ ಕುರಿಗಾಹಿ ಹಾಲಪ್ಪ ಶಂಕರ್ ಅವರಿಗೆ ಸೇರಿದ 8 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ಇದೇ ವೇಳೆ ಹೆರಕಲ್ ಗ್ರಾಮದ ಈರಣ್ಣ ಅವರ ಮನೆಯ ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ವಾತಾವರಣ ತಂಪಾಗಿದೆ. ತಾಳೂರು, ಊಳೂರು, ಉತ್ತನೂರು ಹಾಗೂ ಮಾಟಸೂಗೂರು ಭಾಗಗಳಲ್ಲಿ ಹತ್ತಿ ಮತ್ತು ಕಬ್ಬು ಬೆಳೆದ ರೈತರು ಮಳೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.
ಕರೂರು ಸೇರಿದಂತೆ ಎಂ. ಸೂಗೂರು, ಸಿರಿಗೇರಿ, ಅರಳಿಗನೂರು, ಪಪ್ಪನಾಳ್, ಬಲಕುಂದಿ ಹಾಗೂ ಉಪ್ಪಾರ ಹೊಸಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನೂ ಒಂದೆರಡು ಬಾರಿ ಇದೇ ರೀತಿ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಮಳೆ ಪ್ರಮಾಣ ವಿವರ : ತೆಕ್ಕಲಕೋಟೆ – 1.24 ಸೆಂ.ಮೀ, ಸಿರಿಗೇರಿ – 1.43 ಸೆಂ.ಮೀ, ಎಂ.ಸೂಗೂರು – 0.46 ಸೆಂ.ಮೀ, ಕರೂರು – 4.52 ಸೆಂ.ಮೀ ಮಳೆಯಾಗಿದೆ.




