ಪ್ರಕೃತಿ, ಪರಿಸರ ನಾಶವಾದರೆ ಇಡೀ ಮನುಕುಲ ನಾಶ : ಸಚಿವ ಈಶ್ವರ್ ಖಂಡ್ರೆ

ಬಳ್ಳಾರಿ: ಇತ್ತೀಚಿನ ಪ್ರಕೃತಿ ವಿಕೋಪಗಳು ಮಾನವರಿಗೆ ಪರಿಸರದ ಅಗತ್ಯತೆಯನ್ನು ಹತ್ತಿರವಾಗಿ ತೋರಿಸುತ್ತಿವೆ. ಪ್ರಕೃತಿಗೆ ಮಾನವ ಅಗತ್ಯವಿಲ್ಲದಿರುವುದರಿಂದ ಪರಿಸರ ನಾಶವಾದರೆ ಮಾನವ ಕುಲದ ಉಳಿವಿಗೂ ಅಪಾಯವುಂಟಾಗುತ್ತದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅವರು ಬುಧವಾರ ನಗರದ ಡಾ.ರಾಜ್ ಕುಮಾರ್ ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 50ನೇ ವರ್ಷದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಸುವರ್ಣ ಮಹೋತ್ಸವ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನ ವೈಪರಿತ್ಯಗಳಿಂದ ಸಂಭವಿಸುತ್ತಿರುವ ಬರ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಪರಿಸರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಜಲ, ವಾಯು, ಶಬ್ದ ಮಾಲಿನ್ಯಗಳಿಂದ ಆಗುತ್ತಿರುವ ಹಾನಿಯ ಕುರಿತು ಹಿತೈಸಿ ಸಲಹೆ ನೀಡಿದರು. ಕೊರೋನಾ ಕಾಲದಲ್ಲಿ ಆಮ್ಲಜನಕ ಕೊರತೆಯಿಂದ ಹಲವರು ಮೃತಪಟ್ಟಿದ್ದು, ಗಿಡ–ಮರಗಳಿಂದ ಮಾತ್ರ ಆಮ್ಲಜನಕ ಉತ್ಪತ್ತಿಯಾಗುತ್ತದೆ. ರಾಜ್ಯಾದ್ಯಂತ ಈಗಾಗಲೇ 11 ಕೋಟಿ ಸಸಿಗಳನ್ನು ನೆಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ಮತ್ತು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಮಹತ್ವವನ್ನು ಉದ್ಧೇಶಿಸಿ ಮಾತನಾಡಿದ್ದರು. 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಲಾಗಿತ್ತು. 50 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಮಂಡಳಿಯ ಸಾಧನೆಗಳನ್ನು ಆಚರಿಸಲಾಯಿತು.
ರಾಜ್ಯದಲ್ಲಿ ಅರಣ್ಯ ಪ್ರದೇಶ ಶೇ.21 ಇದ್ದರೆ, ಜಾಗತಿಕ ತಜ್ಞರು ಶೇ.33 ಅರಣ್ಯ ಪ್ರದೇಶ ಅಗತ್ಯವಿರುವುದಾಗಿ ಸೂಚಿಸಿದ್ದಾರೆ. ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನವನ, 5 ಹುಲಿ ಸಂರಕ್ಷಿತ ಪ್ರದೇಶ, 37 ವನ್ಯಜೀವಿ ಧಾಮ, 19 ಮೀಸಲು ಪ್ರದೇಶಗಳಿವೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಹುಲಿಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಪರಿಸರ ಸಂರಕ್ಷಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಜಲ ಮತ್ತು ವಾಯು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿದೆ. ಕೈಗಾರಿಕೆಗಳಿಂದ ಉಂಟಾಗುವ ತ್ಯಾಜ್ಯ, ಧೂಳು, ಹಾನಿಕರ ವಸ್ತುಗಳು ಪರಿಸರಕ್ಕೆ ಹಾನಿ ಮಾಡುತ್ತಿರುವುದರಿಂದ ಪ್ರಭಾವಿತ ಪ್ರದೇಶಗಳಲ್ಲಿ ನಿಯಮಿತ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಬಳ್ಳಾರಿಯಲ್ಲಿ 29 ಸ್ಪಾಂಜ್ ಐರನ್ ಘಟಕಗಳು ಮತ್ತು 42 ಕಬ್ಬಿಣದ ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಉನ್ನತೀಕರಿಸಿದ ವಾಯು ಮಾಲಿನ್ಯ ನಿಯಂತ್ರಣ ಉಪಕರಣಗಳನ್ನು ಅಳವಡಿಸಲಾಗಿದೆ. ಜನರಿಗೆ ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ, ಹಸಿರು ಪಟಾಕಿಗಳನ್ನು ಬಳಸಲು ಜಾಗೃತಿ ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ‘ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಸಂಸದ ಈ. ತುಕಾರಾಮ್, ಸಂಡೂರು ಶಾಸಕರಾದ ಈ. ಅನ್ನಪೂರ್ಣ, ವಿವಿಧ ಅಧಿಕಾರಿಗಳು ಮತ್ತು ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಿಲ್ಲೆಯ ಪರಿಸರ ಸಂರಕ್ಷಣೆಗೆ ಮಹನೀಯರಿಗೆ ಹಾಗೂ ಸಂಘಗಳಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಆಯೋಜಿತ ಪ್ರಬಂಧ ಸ್ಪರ್ಧೆ, ಗೋಡೆ ಬಹರ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಉಪವಿಭಾಗಾಧಿಕಾರಿ ಪಿ.ಪ್ರಮೋದ್, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಟಿ.ಎಂ.ಸಿದ್ದೇಶ್ವರ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆ ಸದಸ್ಯರು, ಜಿಲ್ಲೆಯ ವಿವಿಧ ಕೈಗಾರಿಕೆಗಳ ಕೈಗಾರಿಕೋದ್ಯಮಿಗಳು, ಕಾರ್ಮಿಕರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







