ಕಂಪ್ಲಿಯ ವಿವಿಎಸ್‌ಎಸ್ ಮಹಿಳಾ ಕಾಲೇಜಿನ ಇಂದ್ರಜಾ ಚಿನ್ನದ ಪದಕಕ್ಕೆ ಆಯ್ಕೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ಪ್ರತಿಷ್ಠಿತ ವಿವಿಎಸ್‌ಎಸ್ ಟ್ರಸ್ಟ್‌ನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಎಮ್ಮಿಗನೂರಿನ ಇಂದ್ರಜಾ ಅತ್ಯಧಿಕ ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಪದವಿ ಮಟ್ಟದಲ್ಲಿ ಚಿನ್ನದ ಪದಕ (ಗೋಲ್ಡ್ ಮೆಡಲ್) ಗಳಿಸುವುದು ಶೈಕ್ಷಣಿಕ ಸಾಧನೆಯ ಉನ್ನತ ಹಂತವಾಗಿದ್ದು, 2025–26ನೇ ಸಾಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪದವಿ ಫಲಿತಾಂಶ ಪ್ರಕಟವಾಗಿದೆ. ಬಿಎ ವಿಭಾಗದಲ್ಲಿ ಇಂದ್ರಜಾ 91.38 ಶೇಕಡಾ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಬಂದ ರೈತನ ಮಗಳಾದ ಇಂದ್ರಜಾ, ಪರಿಶ್ರಮ, ನಿರಂತರ ಕಲಿಕೆ ಮತ್ತು ಓದಿನ ಮೂಲಕ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯು ಕಾಲೇಜು ಮತ್ತು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದು, ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದ್ರಜಾ ಅವರು ಏಪ್ರಿಲ್ 21ರಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯುವ 17ನೇ ಘಟಿಕೋತ್ಸವ ಸಮಾರಂಭದಲ್ಲಿ ಅಧಿಕೃತವಾಗಿ ಚಿನ್ನದ ಪದಕ ಸ್ವೀಕರಿಸಲಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಮದ್ದಾನೆಪ್ಪ ಬಿಡನಾಳ, ವಿವಿಎಸ್‌ಎಸ್ ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲಗಪ್ಪ, ಕಾರ್ಯದರ್ಶಿ ಪ್ರಕಾಶ್ ಜಿ. ನಾಯಕ ಹಾಗೂ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ಶಿಕ್ಷಣ ಜೀವನದಲ್ಲಿಯೂ ಇನ್ನಷ್ಟು ಸಾಧನೆ ಮಾಡಲು ಶುಭ ಹಾರೈಸಿದ್ದಾರೆ.






