ನಂದಿಹಳ್ಳಿಯಲ್ಲಿ ಅಂತರಮಹಾವಿದ್ಯಾಲಯ ಗುಡ್ಡಗಾಡು ಓಟ ಸ್ಪರ್ಧೆ
ಪಾಠದ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಿ: ಡಾ. ಗೋವಿಂದಪ್ಪ

ಸಂಡೂರು/ ಬಳ್ಳಾರಿ : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹಂಪಿ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಗೋವಿಂದಪ್ಪ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ ವತಿಯಿಂದ 2026–27ನೇ ಸಾಲಿನ ಅಂತರಮಹಾವಿದ್ಯಾಲಯ ಗುಡ್ಡಗಾಡು ಓಟದ (ಕ್ರಾಸ್ ಕಂಟ್ರಿ) ಸ್ಪರ್ಧೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು. ಸಂಡೂರು ಪೊಲೀಸ್ ಠಾಣೆಯ ಎದುರಿನಿಂದ ಆರಂಭಗೊಂಡ 10 ಕಿ.ಮೀ. ಓಟಕ್ಕೆ ಡಾ. ಗೋವಿಂದಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ತಿಪ್ಪೇಸ್ವಾಮಿ ಎಚ್. ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಸಹಜ. ಸೋಲಿನಿಂದ ನಿರಾಶರಾಗದೆ ಅದನ್ನು ಮುಂದಿನ ಸಾಧನೆಗೆ ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳುವುದರ ಜೊತೆಗೆ ತಂದೆ-ತಾಯಿಗಳಿಗೆ ಹೆಮ್ಮೆ ತರುವ ಮಕ್ಕಳಾಗಿ ಹಾಗೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವ ಸಾಧಕರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಕ್ರೀಡಾ ನಿರ್ದೇಶಕ ಹಾಗೂ ವಿಭಾಗದ ಮುಖ್ಯಸ್ಥ ಡಾ. ಸಂಪತ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ವಿವಿಧ ಕಾಲೇಜುಗಳ ಸುಮಾರು 50ರಿಂದ 55 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯ, ಸಹಿಷ್ಣುತೆ ಹಾಗೂ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು. ವಿಶ್ವವಿದ್ಯಾಲಯದ ತಂಡಗಳ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆದ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರಾದ ಡಾ. ಚೌಡಪ್ಪ ವಿ.ಎ., ಡಾ. ಬಸವರಾಜ ಹಟ್ಟಿ, ಡಾ. ಅಶ್ವಿನಿ ಕುಮಾರ್, ಡಾ. ನಾಗರಾಜ ಜೆ., ಕಿರಣ್ ಕುಮಾರ್, ಕ್ರೀಡಾ ಸಹಾಯಕ ಪಾಪಯ್ಯ, ಕ್ರೀಡಾ ನಿರ್ದೇಶಕ ಶಿವರಾಮಪ್ಪ ರಾಗಿ ಹಾಗೂ ವಿವಿಧ ಕಾಲೇಜುಗಳ ಕ್ರೀಡಾ ನಿರ್ದೇಶಕರಾದ ಡಾ. ಗುರು ಬಸವರಾಜ, ಡಾ. ಕವಿತಾ, ಸಂಗನಗೌಡ, ಡಾ. ಪಂಪನಗೌಡ, ಡಾ. ಮುತ್ತೇಗೌಡ, ಪ್ರದೀಪ್ ಮತ್ತು ಗೌತಮ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಸಂಶೋಧನಾ ವಿದ್ಯಾರ್ಥಿಗಳಾದ ರಮೇಶ್ ಕೆ.ಡಿ., ಹುಲಿರಾಜ್ ಬೊಮ್ಮಘಟ್ಟ, ರಾಮಪ್ಪ ಗೌಡ್ರು ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.






