ಜಿಲ್ಲೆಯಲ್ಲಿ ನೋಂದಣಿಯಾಗಿ ಚಾಲನೆಯಲ್ಲಿರದ ರಾಜಕೀಯ ಪಕ್ಷದ ವಿಚಾರಣೆ ನಡೆಸಲಾಗುವುದು: ಬಳ್ಳಾರಿ ಡಿಸಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ನೋಂದಣಿಯಾಗಿ ಚಾಲನೆಯಲ್ಲಿರದ ರಾಜಕೀಯ ಪಕ್ಷದ ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಆಯೋಗದ ದಾಖಲೆಗಳ ಪ್ರಕಾರ, ಪಕ್ಷವು ಯಾವುದೇ ರಾಜ್ಯ ವಿಧಾನಸಭೆಗೆ ಅಥವಾ ಉಪಚುನಾವಣೆಗೆ 2019 ರಿಂದ ಕಳೆದ 06 ವರ್ಷಗಳಿಂದ ನಡೆದ ಯಾವುದೇ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂಬುದು ಸ್ವಯಂ-ಸ್ಪಷ್ಟವಾಗಿದೆ.
ಆಯೋಗವು ಭಾರತದ ಸಂವಿಧಾನದ ಆರ್ಟಿಕಲ್ 324 ಮತ್ತು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಎ ಅಡಿ ತನ್ನ ಅಧಿಕಾರ ಚಲಾಯಿಸಿ, “ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ” ಎಂಬ ರಾಜಕೀಯ ಪಕ್ಷವನ್ನು ನೋಂದಾಯಿತ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ನೋಂದಾಯಿತ, ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾದ ‘ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷ’ವು ಅಧಿಕೃತ ಪ್ರತಿನಿಧಿಯು ಇಚ್ಛಿಸಿದಲ್ಲಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, ಬೆಂಗಳೂರು ಇವರಿಗೆ 2025ರ ಜುಲೈ 18 ರೊಳಗಾಗಿ ತಮ್ಮ ಲಿಖಿತ ಮನವಿಯನ್ನು ಸಲ್ಲಿಸಬಹುದು.
ಈ ರಾಜಕೀಯ ಪಕ್ಷದ ವಿಚಾರಣೆಯನ್ನು ಸೆಪ್ಟೆಂಬರ್ 01 ರಂದು ನಿಗದಿಪಡಿಸಲಾಗಿದ್ದು, ವಿಚಾರಣೆಗೆ ಪಕ್ಷದ ಮುಖ್ಯಸ್ಥರು/ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು.
ಒಂದು ವೇಳೆ ನಿಗದಿತ ಸಮಯದೊಳಗೆ ಪಕ್ಷದಿಂದ ಯಾವುದೇ ಲಿಖಿತ ಮನವಿ ಸ್ವೀಕೃತವಾಗದೇ ಇದ್ದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







