ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಿವಿಧ ಕೌಶಲ್ಯಗಳನ್ನು ಕಲಿಯುವುದು ಅಗತ್ಯ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಬಳ್ಳಾರಿ: ಇಂದಿನ ವಿದ್ಯಾರ್ಥಿಗಳು ಕೇವಲ ಪಠ್ಯಾಭ್ಯಾಸಕ್ಕೆ ಸೀಮಿತರಾಗದೆ, ವಿವಿಧ ಕೌಶಲ್ಯಗಳನ್ನು ಕಲಿಯುವುದು ಅಗತ್ಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ “ಇಂಕ್ಯುಬೇಷನ್ ಹಾಗೂ ಜಾಬ್ ಪೋರ್ಟಲ್” ಅನ್ನು ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಡಿಗ್ರಿಗಳು ಸಾಲುವುದಿಲ್ಲ. ಪಠ್ಯದ ಜೊತೆಗೆ ಕೌಶಲ್ಯ, ಜ್ಞಾನ, ಸಂವಹನ ಹಾಗೂ ಸಾಮಾನ್ಯ ಜ್ಞಾನ ಅತ್ಯಗತ್ಯ. ಈ ನಿಟ್ಟಿನಲ್ಲಿ ಸರ್ಕಾರವು ಎಐಸಿಟಿ (AICTE) ಯೊಂದಿಗೆ ಸಹಕಾರದಲ್ಲಿ ‘ಕಲಿಕೆಯ ಜೊತೆಗೆ ಕೌಶಲ್ಯ’ ಪಠ್ಯವನ್ನು ರೂಪಿಸಲು ಮುಂದಾಗಿದೆ ಎಂದು ಸಚಿವರು ತಿಳಿಸಿದರು.
ಇದು ಆವಿಷ್ಕಾರಗಳ ಯುಗ. ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳಲ್ಲಿ ಪರಿಣತಿಯಾಗಲು ಪ್ರತಿಯೊಬ್ಬರೂ ಕೌಶಲ್ಯವಂತರಾಗಬೇಕು. ಉದ್ಯೋಗಮೇಳಗಳಲ್ಲಿ ಭಾಗವಹಿಸುವವರಿಗೆ ಕೌಶಲ್ಯಾಭಿವೃದ್ಧಿ, ಸಂವಹನ, ಸಾಮಾನ್ಯ ಜ್ಞಾನ, ಎಐ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳ ತರಬೇತಿ ನೀಡಲಾಗುತ್ತಿದೆ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ಉಮಾರೆಡ್ಡಿ ಅವರು ಜಾಬ್ ಪೋರ್ಟಲ್ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಜಂಟಿ ಕಾರ್ಯದರ್ಶಿ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಮುಲ್ಲಂಗಿ ನಂದೀಶ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.







