ಅಸೂಯೆಯಿಂದ ವಾಲ್ಮೀಕಿ ಬ್ಯಾನರ್ ಕಿತ್ತುಹಾಕಿದ್ದು ಬಳ್ಳಾರಿ ದುರ್ಘಟನೆಗೆ ಕಾರಣ: ಡಿ.ಕೆ.ಶಿವಕುಮಾರ್

ಬಳ್ಳಾರಿ : “ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಬಳ್ಳಾರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
“ಸ್ಥಳೀಯ ನಾಯಕರು ಇಲ್ಲಿ ಪುತ್ಥಳಿ ಆಗಬೇಕು ಎಂದು ಕೈಗೊಂಡಿರುವ ತೀರ್ಮಾನ ಸರಿಯಾಗಿದೆ. ಡಿ.24 ರಿಂದ ಡಿ.29 ರವರೆಗೆ ಈ ಜಿಲ್ಲೆಯ ಜನ ಬಹಳ ಸಂಭ್ರಮದಿಂದ ಪುತ್ಥಳಿ ಸ್ವಾಗತ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಿದ್ದರು. ಈಗ ಕೇವಲ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದಿದೆ. ಜ.1 ರಂದು ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಕಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಕಡೆ ಬ್ಯಾನರ್ ಕಟ್ಟುತ್ತಾರೆ. ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ಧನ ರೆಡ್ಡಿ ಅಥವಾ ಶ್ರೀರಾಮುಲು ಅವರಿಗೆ ಅಸಮಾಧಾನವಿದ್ದಿದ್ದರೆ, ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಶಾಸಕರು, ಇತರೆ ನಾಯಕರಿಗೆ ಕರೆ ಮಾಡಿ, ನಮಗೆ ವಾಲ್ಮೀಕಿ ಅವರ ಬ್ಯಾನರ್ ನೋಡಿದರೆ ಆಗುವುದಿಲ್ಲ, ಈ ಜನಾಂಗ ನಮಗೆ ಮೋಸ ಮಾಡಿದೆ. ಕೇವಲ ಕಾಂಗ್ರೆಸ್ ನವರನ್ನು ಗೆಲ್ಲಿಸಿದ್ದಾರೆ. ಬ್ಯಾನರ್ ತೆಗೆಯಿರಿ ಎಂದಿದ್ದರೆ ಅವರು ತೆರವು ಮಾಡುತ್ತಿದ್ದರು ಎಂದರು.
ಆದರೆ ಅವರು ಯಾರಿಗೂ ಸೂಚನೆ ನೀಡಿಲ್ಲ. ಬದಲಿಗೆ ವಾಲ್ಮೀಕಿ ಅವರಿಗೆ ಅಪಮಾನವಾಗುವ ರೀತಿ ಬ್ಯಾನರ್ ತೆರವುಗೊಳಿಸಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತೆ ಬ್ಯಾನರ್ ಹಾಕಲು ಹೋಗಿದ್ದಾರೆ. ನಂತರದ ಘಟನೆಗಳನ್ನು ನಾನು ನೋಡಿದ್ದೇನೆ. ಅವರ ಮುಂದಾಳತ್ವದಲ್ಲೇ ಬ್ಯಾನರ್ ಹರಿದುಹಾಕಿದ್ದಾರೆ. ಇದು ಸರಿಯೋ ತಪ್ಪೋ ಎಂದು ನಾನು ತೀರ್ಮಾನ ಮಾಡುವುದಿಲ್ಲ, ನೀವುಗಳೇ ತೀರ್ಮಾನ ಮಾಡಿ” ಎಂದರು.
“ನಾನು ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಲು ಇಲ್ಲಿಗೆ ಬಂದಿಲ್ಲ. ಕಾನೂನು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಬಹಳ ದಿಟ್ಟವಾಗಿ ಅಗತ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆ ಸರಿ ಎಂದು ನಾನು ಹೇಳುವುದಿಲ್ಲ. ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ, ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಝಡ್ ಕೆಟಗರಿ ಭದ್ರತೆ ಪಡೆಯಲಿ :
“ಶಾಸಕರು ಹಾಗೂ ಸಂಸದರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಜನಾರ್ಧನ ರೆಡ್ಡಿ ದಂಪತಿಗೆ ಐವರು ಭದ್ರತಾ ಸಿಬ್ಬಂದಿ ನೀಡಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು, ಕೊಪ್ಪಳದಲ್ಲಿ ಒಬ್ಬರು, ಅವರ ಧರ್ಮಪತ್ನಿಗೆ ಒಬ್ಬರು, ಸೋಮಶೇಖರ್ ಅವರಿಗೆ ಒಬ್ಬರು, ಶ್ರೀರಾಮುಲು ಅವರಿಗೆ ಇಬ್ಬರು ಗನ್ ಮ್ಯಾನ್ ಗಳನ್ನು ನಿಯೋಜಿಸಲಾಗಿದ್ದು, ಈ ಭದ್ರತಾ ಸಿಬ್ಬಂದಿ ಅವರ ಜತೆಯಲ್ಲೇ ಇದ್ದಾರೆ. ಜನಾರ್ಧನ ರೆಡ್ಡಿ ಅವರು ತಮ್ಮನ್ನು ಕೊಲ್ಲುವ ಸಂಚು ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಅವರು ದೂರು ನೀಡಿದ್ದಾರಾ ಎಂದು ಕೇಳಿದೆ. ಯಾವುದೇ ದೂರು ನೀಡಿಲ್ಲ ಎಂಬ ವಿಚಾರ ತಿಳಿಯಿತು. ಜನಾರ್ಧನ ರೆಡ್ಡಿ ಅವರಿಗೆ ದೂರು ನೀಡಲು ಸಾಧ್ಯವಾಗದಿದ್ದರೆ, ಅವರ ಗನ್ ಮ್ಯಾನ್ ಗಳು ದೂರು ನೀಡಲು ಅವಕಾಶವಿದೆ. ಅವರು ಝಡ್ ಕೆಟಗೆರಿ ಭದ್ರತೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಭದ್ರತೆಯನ್ನು ಯಾರು ನೀಡಬೇಕು ಎಂದು ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಈ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ತಿಳಿಯಿತು. ಝಡ್ ಕೆಟಗರಿ ಭದ್ರತೆ ಬೇಕಾಗಿರುವವರು ಕೇಂದ್ರ ಸರ್ಕಾರದಿಂದ ತೆಗೆದುಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ” ಎಂದು ತಿರುಗೇಟು ನೀಡಿದರು.
ಬಳ್ಳಾರಿ ಇತಿಹಾಸಕ್ಕೆ ಧಕ್ಕೆ ಬರುವಂತೆ ವರ್ತಿಸಬೇಡಿ :
“ಈ ಅಹಿತಕರ ಘಟನೆ ಆಗಬಾರದಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಬಳ್ಳಾರಿ ಇತಿಹಾಸ ದೊಡ್ಡದಿದೆ. ದಯವಿಟ್ಟು ಇದರ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ. ನಾನು ನಮ್ಮವರಿಗೆ ಬುದ್ಧಿವಾದ ಹೇಳಿದ್ದು, ಮುಂದೆಯೂ ಹೇಳುತ್ತೇನೆ. ಬಿಜೆಪಿಯವರಿಗೆ ಅವರ ನಾಯಕರು ಬಹಳ ದೊಡ್ಡವರಿದ್ದಾರೆ, ಅವರಿಗೆ ಬಿಡುತ್ತೇನೆ” ಎಂದು ತಿಳಿಸಿದರು.
“ಕುಮಾರಸ್ವಾಮಿ ಅವರು ಇಲ್ಲಿಗೆ ಬಾರದೇ, ಅಲ್ಲೆಲ್ಲೋ ಹೇಳಿಕೆ ನೀಡಿದ್ದಾರೆ. ಎರಡು ಬಾರಿ ಶವಪರೀಕ್ಷೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಅವರಿಗೆ ಯಾರು ಸಂಶೋಧನೆ ಮಾಡಿ ಈ ಮಾಹಿತಿ ನೀಡಿದರೋ ಗೊತ್ತಿಲ್ಲ. ಈ ವಿಚಾರವಾಗಿ ಜಿಲ್ಲಾ ವೈದ್ಯಾಧಿಕಾರಿ ಅವರನ್ನು ವಿಚಾರಿಸಿದೆ. ಅವರು ಶವಪರೀಕ್ಷೆಗೆ ಒಂದೇ ಒಂದು ಅರ್ಜಿ ಬಂದಿದೆ. ಬೆಳಗ್ಗೆ 6-8 ಗಂಟೆವರೆಗೂ ಶವಪರೀಕ್ಷೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಯಾವ ಲೆಕ್ಕದಲ್ಲಿ 2 ಶವಪರೀಕ್ಷೆ ನಡೆದಿದೆ ಎಂದು ಕೇಂದ್ರ ಸಚಿವರು ರಾಜ್ಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಮಾಹಿತಿ ಮೂಲ ಏನು ಎಂದು ಮಾಧ್ಯಮಗಳು ಕೇಳಬೇಕು. ಅಂತ್ಯಸಂಸ್ಕಾರ ಆದ ನಂತರ ಶವ ತೆಗೆದು ಪರೀಕ್ಷೆ ಮಾಡಲಾಗಿದೆಯೇ ಎಂದು ನಾನು ತಿಳಿದುಕೊಳ್ಳಬೇಕು” ಎಂದು ತಿರುಗೇಟು ನೀಡಿದರು.
“ಈ ಪ್ರಕರಣದ ಪ್ರತಿ ಘಟನೆ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದೇನೆ. ಶ್ರೀರಾಮುಲು, ಜನಾರ್ಧನ ರೆಡ್ಡಿ ಅವರ ಹೇಳಿಕೆ ನೋಡಿದ್ದೇನೆ. ಜನಾರ್ಧನ ರೆಡ್ಡಿ ಅವರ ಹೇಳಿಕೆಯಂತೆ ಅವರ ಹತ್ಯೆಗೆ ಸಂಚು ರೂಪಿಸಿದ್ದರೆ ಅವರ ಮನೆ ಮಹಜರ್ ಮಾಡಿಸಬೇಕಿತ್ತು. ಅವರ ಮೇಲೆ ಗುಂಡು ಹಾರಿಸಿದ್ದರೆ ಅವರ ದೇಹದ ಯಾವ ಭಾಗಕ್ಕೆ ಗಾಯವಾಗಿತ್ತು, ಅವರ ಮನೆಯ ಯಾವ ಭಾಗಕ್ಕೆ ಹಾನಿಯಾಗಿದೆ ಎಂದು ತೋರಿಸಬೇಕಿತ್ತಲ್ಲವೇ?” ಎಂದು ತಿಳಿಸಿದರು.
“ಯಾರೂ ಉದ್ವೇಗಕ್ಕೆ ಒಳಗಾಗಬಾರದು ಎಂದು ಕಾರ್ಯಕರ್ತರಿಗೆ ತಿಳಿಸಿದ್ದೇವೆ. ನಮ್ಮ ಶಾಸಕರು ಯುವಕರು ಬಿಸಿ ರಕ್ತ. ಕಾರ್ಯಕರ್ತರನ್ನು ವಿಚಾರಿಸಲು ಹೋಗಿದ್ದಾರೆ. ನಮ್ಮ ಶಾಸಕರು ಕಾನೂನು ಚೌಕಟ್ಟು ಮೀರಿ ವರ್ತನೆ ಮಾಡಿದ್ದಾರಾ ಎಂದು ಪೊಲೀಸ್ ಅಧಿಕಾರಿಗಳನ್ನು ಕೇಳಿದೆ, ಇಲ್ಲ, ಅವರು ನಮಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಘಟನೆ ನಡೆದಾಗ ಶ್ರೀರಾಮುಲು ಅವರು ಕರೆ ಮಾಡಿದಾಗ, ನಾನು ತಕ್ಷಣವೇ ಎಸ್ಪಿ ಜೊತೆ ಮಾತನಾಡಿದ್ದೇನೆ. ನಮ್ಮವರು ತಪ್ಪು ಮಾಡಿದ್ದರೂ ತಪ್ಪು ಎಂದು ಹೇಳುತ್ತೇವೆ. ಈ ರೀತಿ ಹೇಳದಿದ್ದರೆ ಅವರನ್ನು ತಿದ್ದಲು ಆಗುವುದಿಲ್ಲ” ಎಂದರು.
ಮೃತ ಕಾರ್ಯಕರ್ತನ ಕುಟುಂಬದ ಜೊತೆ ಪಕ್ಷವಿದೆ :
ಕಾರ್ಯಕರ್ತ ರಾಜಶೇಖರ್ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬದ ಜೊತೆ ಪಕ್ಷವಿದೆ ಎನ್ನುವ ಕಾರಣಕ್ಕೆ ನಾನು ಅವರ ಮನೆಗೆ ಭೇಟಿ ನೀಡಲು ಬಂದಿದ್ದೇನೆ” ಎಂದರು.







