ಕಂಪ್ಲಿ | ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು ಅಗತ್ಯ: ಸುಗ್ಗೆನಹಳ್ಳಿ ರಮೇಶ

ಕಂಪ್ಲಿ: ತಾಲೂಕಿನ ರಾಮಸಾಗರ ಕಾರ್ಯಕ್ಷೇತ್ರದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ ವತಿಯಿಂದ ತುಂಗಭದ್ರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಕ್ಕಳಿಗೆ ಶಿಕ್ಷಣ ಹಾಗೂ ಜೀವನ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಗ್ಗೆನಹಳ್ಳಿ ರಮೇಶ ಅವರು, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು ಕುಗ್ಗುತ್ತಿರುವುದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಮಕ್ಕಳಲ್ಲಿ ಮೌಲ್ಯಗಳು, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಮಕ್ಕಳು ಗುರು–ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಬೇಕು. ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಮೊಬೈಲ್ ಬಳಕೆಯನ್ನು ಮಕ್ಕಳಲ್ಲಿ ನಿಯಂತ್ರಿಸಬೇಕು. ಅದರಿಂದ ಅವರು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬಹುದು ಎಂದು ಸಲಹೆ ನೀಡಿದರು.
ನಂತರ ಸಮನ್ವಯಾಧಿಕಾರಿ ರೇಖಾ ಎಂ.ಬಿ. ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯಗುರು ರಾಮಮೋಹನ್ ಎಸ್., ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ, ಶಿಕ್ಷಕರು, ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿ ಶೈಲಜಾ ರಮೇಶ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







