ಕಂಪ್ಲಿ | ಸನ್ಮಾರ್ಗದ ದಾರಿತೋರಿದ ಮಹಾಯೋಗಿ ವೇಮನರು : ಬಸಲಿಂಗನಗೌಡ

ಕಂಪ್ಲಿ: ಮಹಾಯೋಗಿ ವೇಮನರು ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಉಪದೇಶ ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಯೂ ತನ್ನ ಸಾಧನೆ ಮತ್ತು ಪರಿಶ್ರಮದಿಂದ ಮಹಾಯೋಗಿಯಾಗಬಹುದು ಎಂಬುದಕ್ಕೆ ವೇಮನರೇ ಸಾಕ್ಷಿ ಎಂದು ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸಲಿಂಗನಗೌಡ ಹೇಳಿದರು.
ಪಟ್ಟಣದ ಬಳ್ಳಾರಿ ರಸ್ತೆಯ ಸಂಘದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೇಮನ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೋಕಶಾಂತಿಯನ್ನು ಸಾರಿದ ವೇಮನರ ಜೀವನ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ವೆಂಕಟರೆಡ್ಡಿ, ಮುಖಂಡರಾದ ಟಿ.ವಿ. ಸುದರ್ಶನರೆಡ್ಡಿ, ವೀರನರೆಡ್ಡಿ, ಭಾಸ್ಕರ್ ರೆಡ್ಡಿ, ವೈ. ಶರಣಗೌಡ, ಕೇಶವರೆಡ್ಡಿ, ಡಾ. ಪಿ. ಅಶೋಕ್ ಹಾಂದ್ರಾಳ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ತಹಶೀಲ್ದಾರ್ ಕಚೇರಿಯಲ್ಲಿ ಆಚರಣೆ :
ಸ್ಥಳೀಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸರ್ಕಾರಿ ವತಿಯಿಂದ ವೇಮನ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಜೂಗಲ್ ಮಂಜುನಾಯಕ, ವೇಮನರು ಜಾತಿ ಮತ್ತು ಧರ್ಮದ ಸೀಮಿತ ಚೌಕಟ್ಟುಗಳನ್ನು ಮೀರಿ ಲೋಕಕಲ್ಯಾಣದ ತತ್ವಗಳನ್ನು ಬೋಧಿಸಿದರು. ಮುಂದಿನ ಪೀಳಿಗೆಗೆ ಇಂತಹ ಮಹನೀಯರ ಆದರ್ಶಗಳನ್ನು ತಲುಪಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ. ಸುದರ್ಶನರೆಡ್ಡಿ, ರೆಡ್ಡಿ ಜನ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.







