ಕಂಪ್ಲಿ | ಶಾಂತಾ ಗಡ್ಡದ ಅವರಿಗೆ ʼಉತ್ತಮ ಶಿಕ್ಷಕಿ ಪ್ರಶಸ್ತಿʼ ಪ್ರಧಾನ

ಕಂಪ್ಲಿ : ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಂತಾ ಗಡ್ಡದ ಅವರು ಶೈಕ್ಷಣಿಕ ಅಭಿವೃದ್ಧಿ ಹಾಗೂ ಬೋಧನಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಒಳಗೊಳ್ಳುವ ರೀತಿಯ ಕ್ರಿಯಾಶೀಲತೆಗೆ ದಕ್ಷಿಣ ಭಾರತದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದು ತಾಲ್ಲೂಕಿಗೆ ಗೌರವ ತಂದಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಶ್ರೀಗುರು ಚೈತನ್ಯ ಉಪಾಧ್ಯಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಪಲೇಲ ರಾಮಾಂಜಿನೇಲು, ಕಾರ್ಯದರ್ಶಿ ಮೊಹಮ್ಮದ್ ಹುಸೇನ್, ಮುಖಂಡರಾದ ಪ್ರೊ. ಶೈಲಜಾ, ಬಿ. ರಾಮಚಂದ್ರ ಯಾದವ್, ಚಿಂತಲ ಅನಂತಲಕ್ಷ್ಮೀ, ಶ್ರೀನಿವಾಸರಾವ್, ಕೆ. ರಮೇಶ್ ಯಾದವ್, ವೀರಶಿವಬಾಬು, ಮುರಳಿಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಶಾಂತಾ ಗಡ್ಡದ ಅವರನ್ನು ಶಾಲೆಯ ಸಹ ಶಿಕ್ಷಕರಾದ ಗುರುಸಿದ್ದಪ್ಪ, ರಾಜ್ಯ ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ನಾನಗನಗೌಡ ಎಂ.ಎ. ಸೇರಿದಂತೆ ತಾಲ್ಲೂಕಿನ ವಿವಿಧ ಶಿಕ್ಷಕರು ಅಭಿನಂದಿಸಿದ್ದಾರೆ.







