ಕಂಪ್ಲಿ | ಕಾಯಕ ಗ್ರಾಮ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ : ಮಲ್ಲನಗೌಡ ಕೆ.ಎಸ್.

ಕಂಪ್ಲಿ : ಕಾಯಕ ಗ್ರಾಮ ಯೋಜನೆಯ ಮೂಲಕ ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಕಲ್ಪಿಸಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್. ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ʼಕಾಯಕ ಗ್ರಾಮ ಕಾರ್ಯಕ್ರಮʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಗ್ರಾಮ ಯೋಜನೆಯಡಿ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. 15ನೇ ಹಣಕಾಸು ಆಯೋಗದ ಅನುದಾನ, ಸ್ಥಳೀಯ ಸಂಸ್ಥೆಗಳ ನಿಧಿ ಹಾಗೂ ನರೇಗಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ನೈರ್ಮಲ್ಯ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಕಂಪ್ಲಿ ತಾಲೂಕಿನಲ್ಲಿ ನಂ.10 ಮುದ್ದಾಪುರ, ಹಂಪಾದೇವನಹಳ್ಳಿ, ದೇವಸಮುದ್ರ, ದೇವಲಾಪುರ ಮತ್ತು ಮೆಟ್ರಿ ಗ್ರಾಮ ಪಂಚಾಯಿತಿಗಳು ಕಾಯಕ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಈ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪಿಡಿಒ ಶಿಲ್ಪರಾಣಿ ಮಾತನಾಡಿ, ಕಾಯಕ ಗ್ರಾಮ ಯೋಜನೆಯ ಮೂಲಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಪ್ರತಿಯೊಂದು ಹಳ್ಳಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದೇ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೋಮೇಶ್ವರಿ ಪರಶುರಾಮ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಡೆ ಸಾವಿತ್ರಮ್ಮ ಮಹಾದೇವಪ್ಪ, ಸದಸ್ಯರಾದ ಡಿ. ರಾಮಯ್ಯ, ಗೌರಮ್ಮ, ಓರಾವಿ ಮಹಾದೇವಪ್ಪ, ರೇಣುಕಮ್ಮ, ವನಜಾಕ್ಷಿ, ಎಡಿಪಿಆರ್ ಶ್ರೀಶೈಲಗೌಡ, ಕೃಷಿ ಇಲಾಖೆಯ ಸಿಬ್ಬಂದಿ, ರೀಡ್ಸ್ ಸಂಸ್ಥೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.







