ಕಂಪ್ಲಿ | ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್ ನೇಮಕಕ್ಕೆ ಭೀಮ್ ಆರ್ಮಿ ಆಗ್ರಹ

ಕಂಪ್ಲಿ : ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸಲು ನಾಡ ಕಚೇರಿಯಲ್ಲಿ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್ ನೇಮಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ್ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಭೀಮ್ ಆರ್ಮಿಯ ಗೌರವಾಧ್ಯಕ್ಷ ಸಣಾಪುರ ಮರಿಸ್ವಾಮಿ ಮಾತನಾಡಿ, ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದಿರುವ ಕಂಪ್ಲಿಯಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿ ಸೇವೆ ಪಡೆಯುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಹಲವು ವರ್ಷಗಳಿಂದ ಒಬ್ಬರೇ ಡಾಟಾ ಎಂಟ್ರಿ ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದು, ಜಾತಿ, ಆದಾಯ, ಎ–ಬಿ–ಸಿ ತಿದ್ದುಪಡಿ, ವಿಧವಾ ವೇತನ, ಸರ್ವೆ ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಲು ಗ್ರಾಮೀಣ ಭಾಗದ ಜನರು, ರೈತರು ಹಾಗೂ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕಚೇರಿಯಲ್ಲಿ ಸರ್ಕಾರ ನಿಗದಿಪಡಿಸಿರುವ ಅರ್ಜಿ ಶುಲ್ಕದ ಧರಪಟ್ಟಿಯನ್ನು ಪ್ರದರ್ಶಿಸುವುದರ ಜೊತೆಗೆ, ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣವೇ ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಭೀಮ್ ಆರ್ಮಿ ಅಧ್ಯಕ್ಷ ಎ.ಎಸ್. ಯಲ್ಲಪ್ಪ ಮಾತನಾಡಿ, ಸಾರ್ವಜನಿಕರಿಂದ ವಸೂಲಾಗುವ ಪ್ರತಿಯೊಂದು ಅರ್ಜಿಯ ಶುಲ್ಕದ ವಿವರವನ್ನು ಕಚೇರಿಯಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಸರ್ಕಾರ ನಿಗದಿಪಡಿಸಿದ ಧರಪಟ್ಟಿ ಅಳವಡಿಸಿ, ಹೆಚ್ಚುವರಿ ಸಿಬ್ಬಂದಿಯನ್ನು ಶೀಘ್ರದಲ್ಲೇ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಕ್ಲಿ ಬಸವರಾಜ, ಆರ್.ಎಂ.ಎಚ್. ಧನುಷ್, ಮೆಟ್ರಿ ಬಸವರಾಜ, ಎಚ್. ಹುಲಿಗೇಶ್, ಪ್ರವೀಣ್, ಶಿವಕುಮಾರ್, ಬಸಮ್ಮ ಸೇರಿದಂತೆ ಭೀಮ್ ಆರ್ಮಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






