ಕಂಪ್ಲಿ | ಶಾದಿ ಮಹಲ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ ಅವರಿಂದ ಭೂಮಿಪೂಜೆ

ಬಳ್ಳಾರಿ/ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನ ಸಮೀಪ, 2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಶಾದಿ ಮಹಲ್ ಕಟ್ಟಡ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಪ್ಲಿ ಕ್ಷೇತ್ರದ ಕಂಪ್ಲಿ, ಎಮ್ಮಿಗನೂರು, ಕಗ್ಗಲ್ ಹಾಗೂ ಗೆಣಕಿಹಾಳ್ ಗ್ರಾಮಗಳಲ್ಲಿ ತಲಾ 1 ಕೋಟಿ ರೂ. ಅನುದಾನದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ಜೊತೆಗೆ, ತಲಾ 33 ಲಕ್ಷ ರೂ. ವೆಚ್ಚದಲ್ಲಿ 8 ಖಬರಸ್ತಾನ್‌ಗಳ ಅಭಿವೃದ್ಧಿಗೆ ಒಟ್ಟು 2.64 ಕೋಟಿ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂಪ್ಲಿಯ ಸಕ್ಕರೆ ಕಾರ್ಖಾನೆ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಮೌಲಾನ ಆಜಾದ್ ಶಾಲೆಯ ನಿರ್ಮಾಣ ಕಾಮಗಾರಿ ಕೂಡ ಈಗಾಗಲೇ ಪ್ರಾರಂಭವಾಗಿದ್ದು, ಇದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ಅಶ್ಫಕ್, ಡಾ. ನೂರ ಮುಹಮ್ಮದ್ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





