ಕಂಪ್ಲಿ | ನಕಲಿ ಹೈಟೆಕ್ 3201 ಜೋಳದ ಬೀಜದಿಂದ ಬೆಳೆ ವಿಫಲ: ರೈತರ ಜಮೀನುಗಳಿಗೆ ವಿಜ್ಞಾನಿಗಳ ತಂಡ ಭೇಟಿ

ಕಂಪ್ಲಿ: ಕಳಪೆ ಹಾಗೂ ನಕಲಿ ಹೈಟೆಕ್ 3201 ತಳಿಯ ಜೋಳದ ಬೀಜ ಬಿತ್ತನೆಯಿಂದ ಬೆಳೆ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ಶನಿವಾರ ತಾಲ್ಲೂಕಿನ ಎಮ್ಮಿಗನೂರು ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಂಪ್ಲಿ, ಎಮ್ಮಿಗನೂರು, ಕುರುಗೋಡು, ಮುದೇನೂರು, ಸುಗೂರು ಹಾಗೂ ಸೋಮಸಮುದ್ರ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಬೆಳೆ ಬೀಜದ ದೋಷದಿಂದ ಕೈಕೊಟ್ಟಿದೆ. ಪ್ರತಿ ಎಕರೆಗೆ 40 ಸಾವಿರ ರೂ. ನಿಂದ 50 ಸಾವಿರ ರೂ. ವರೆಗೆ ಖರ್ಚು ಮಾಡಿದ್ದ ರೈತರು, ಫಸಲು ಬಾರದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳೆ ಹಾನಿಯ ವಾಸ್ತವಾಂಶ ಅರಿಯಲು ಭೇಟಿ ನೀಡಿದ್ದ ತಂಡದಲ್ಲಿ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಡಿ. ಕೃಷ್ಣಮೂರ್ತಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡಾ. ಕೆ. ಲೋಕೇಶ್, ತಳಿ ಅಭಿವೃದ್ಧಿ ವಿಜ್ಞಾನಿ ಡಾ. ವೀರೇಶ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ರೆಡ್ಡಿ ಹಾಗೂ ಕೃಷಿ ಅಧಿಕಾರಿ ಜ್ಯೋತಿ ಇದ್ದರು.
ನಕಲಿ ಹಾಗೂ ಕಳಪೆ ಬೀಜ ಪೂರೈಸಿರುವ ಕಂಪನಿ ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಧಿಕಾರಿಗಳು ಸರ್ಕಾರಕ್ಕೆ ಸಮರ್ಪಕ ವರದಿ ಸಲ್ಲಿಸಿ, ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ, ತಾಲ್ಲೂಕು ಅಧ್ಯಕ್ಷ ವೀರೇಶ್, ಎಮ್ಮಿಗನೂರಿನ ರೈತ ಮುಖಂಡ ದೇವಯ್ಯ ಹಾಗೂ ಸ್ಥಳೀಯ ರೈತರು ಒತ್ತಾಯಿಸಿದರು.






