Kampli | ಡಿ.15ರವರೆಗೆ ಎಲ್ಎಲ್ಸಿ ಕಾಲುವೆಗೆ ನೀರು ಹರಿಸಲು ಆಗ್ರಹ: ನ.14ರಿಂದ ರೈತರ ಪಾದಯಾತ್ರೆ

ಕಂಪ್ಲಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್ಎಲ್ಸಿ) ಡಿ.15ರವರೆಗೆ ನೀರು ಹರಿಸದಿದ್ದರೆ ಈ ಭಾಗದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಲಿದ್ದು, ರೈತ ಕುಟುಂಬಗಳು ಬೀದಿಗೆ ಬೀಳಲಿವೆ. ಬೆಳೆ ಉಳಿಸಿಕೊಳ್ಳುವ ಉದ್ದೇಶದಿಂದ ನ.14ರಿಂದ ‘ರೈತರ ನಡೆ ತುಂಗಭದ್ರಾ ಡ್ಯಾಂ ಕಡೆ’ ಎಂಬ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿ ಹೊಸ ಗೇಟ್ ಅಳವಡಿಸುವ ಕಾರಣದಿಂದ ಕಳೆದ ಬಾರಿ ಜಲಾಶಯದಲ್ಲಿ ನೀರಿದ್ದರೂ ಬೇಸಿಗೆ ಬೆಳೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆವು. ಈ ಬಾರಿ ಹೆಚ್ಚಿನ ಖರ್ಚು ಮಾಡಿ ಭತ್ತ ಮತ್ತು ಜೋಳ ಬೆಳೆದಿದ್ದು, ಬೆಳೆಗಳು ಈಗಷ್ಟೇ ಕಾಳು ಕಟ್ಟುವ ಹಾಗೂ ತೆನೆ ಬಿಡುವ ಹಂತದಲ್ಲಿವೆ. ಆದರೆ, ಸರ್ಕಾರ ನವೆಂಬರ್ 20ರವರೆಗೆ ಮಾತ್ರ ನೀರು ಹರಿಸುವುದಾಗಿ ಹೇಳಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ.14ರಂದು ಬೆಳಿಗ್ಗೆ ಪಟ್ಟಣದ ಉದ್ಭವ ಗಣಪತಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದ್ದು, ನ. 16ರಂದು ಮುನಿರಾಬಾದ್ನಲ್ಲಿರುವ ನೀರಾವರಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಸರ್ಕಾರ ತಕ್ಷಣವೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ, ಅವುಗಳ ಪಾಲಿನ ನೀರನ್ನು ಪಡೆಯಬೇಕು. ಜೊತೆಗೆ, ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಪಡೆದು ಡಿ.15ರವರೆಗೆ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ರಮೇಶ, ತಾಲ್ಲೂಕು ಅಧ್ಯಕ್ಷ ವಿ. ವೀರೇಶ್, ನಗರ ಘಟಕದ ಖಜಾಂಚಿ ಟಿ. ಗಂಗಣ್ಣ ಹಾಗೂ ಮುಖಂಡರಾದ ವಿ.ಟಿ. ರಾಜು, ಬಿ.ಎಂ. ರುದ್ರಯ್ಯ ಉಪಸ್ಥಿತರಿದ್ದರು.






