Kampli | ಹೊರರಾಜ್ಯದ ಭತ್ತದ ಅಕ್ರಮ ಆಮದು ತಡೆಯದಿದ್ದರೆ ತೀವ್ರ ಹೋರಾಟ: ರೈತ ಸಂಘ ಎಚ್ಚರಿಕೆ

ಕಂಪ್ಲಿ: ರಾಜ್ಯದ ಸ್ಥಳೀಯ ಮಾರುಕಟ್ಟೆಗಳಿಗೆ ಹೊರರಾಜ್ಯಗಳಿಂದ ಅನಿಯಂತ್ರಿತವಾಗಿ ಹಾಗೂ ಅಕ್ರಮವಾಗಿ ಭತ್ತ ಆಮದಾಗುವುದನ್ನು ತಡೆಯಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ವತಿಯಿಂದ ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ರೈತರು ಸಾಲಸೋಲ ಮಾಡಿ ದುಬಾರಿ ಗೊಬ್ಬರ, ಕೀಟನಾಶಕ ಹಾಗೂ ಕೂಲಿ ವೆಚ್ಚ ಭರಿಸಿ ಬೆಳೆ ಬೆಳೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆಗೆ ಹರಿದುಬರುತ್ತಿರುವುದರಿಂದ ಸ್ಥಳೀಯ ಭತ್ತಕ್ಕೆ ಸೂಕ್ತ ಬೆಲೆ ಸಿಗದೆ, ಬೆಲೆ ಕುಸಿತದ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಬಾರಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆಗಾಗಿ ನದಿಗೆ ನೀರು ಹರಿಸಿದ್ದರಿಂದ ಕಂಪ್ಲಿ, ಸಿರುಗುಪ್ಪ ಹಾಗೂ ಕುರುಗೋಡು ಭಾಗದ ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊರರಾಜ್ಯಗಳಿಂದ ಭತ್ತದ ಆಮದಾಗುತ್ತಿರುವುದು ರೈತರನ್ನು ಮತ್ತಷ್ಟು ಆರ್ಥಿಕ ನಷ್ಟಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರರಾಜ್ಯಗಳಿಂದ ಬರುತ್ತಿರುವ ಭತ್ತದ ಸಾಗಣೆ ಮತ್ತು ಮಾರಾಟದ ಮೂಲಗಳ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಸಬೇಕು. ಕಂಪ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಸ್ಥಳೀಯ ರೈತರ ಭತ್ತಕ್ಕೆ ಮೊದಲ ಆದ್ಯತೆ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಅಕ್ರಮ ಸಾಗಣೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕೃಷಿ, ಆಹಾರ ಮತ್ತು ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ವಿಶೇಷ ಪರಿಹಾರ ಘೋಷಿಸಬೇಕು. ಹೊರರಾಜ್ಯದ ಭತ್ತದ ಅನಿಯಂತ್ರಿತ ಆಮದಿಗೆ ಕಡಿವಾಣ ಹಾಕದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಭರಮರೆಡ್ಡಿ ಜೆ., ತಾಲ್ಲೂಕು ಅಧ್ಯಕ್ಷರಾದ ವಿ. ವೀರೇಶ (ಕಂಪ್ಲಿ), ಮಂಜುನಾಥ (ಕುರುಗೋಡು), ಕಾರ್ಯಾಧ್ಯಕ್ಷ ಕೆ. ರಮೇಶ, ಸಿರುಗುಪ್ಪದ ಮುಖಂಡ ರಾಘವೇಂದ್ರ ರೆಡ್ಡಿ ಹಾಗೂ ನಗರ ಘಟಕದ ಅಧ್ಯಕ್ಷ ತಿಮ್ಮಪ್ಪ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.






