Kampli | ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ: ಬಸವರಾಜ ಶಾಸ್ತ್ರಿ

ಕಂಪ್ಲಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ನಾಡಿನ ಆಸ್ತಿಯನ್ನಾಗಿ ರೂಪಿಸುವ ಹೊಣೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಕಲ್ಯಾಣ ಚೌಕಿಮಠದ ಬಸವರಾಜ ಶಾಸ್ತ್ರಿ ಹೇಳಿದರು.
ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ಕಲ್ಯಾಣ ಚೌಕಿಮಠದ ಶಂಭುಲಿಂಗೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ 8ನೇ ವಾರ್ಡ್ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕೇ ಹೊರತು ಸಮಾಜಕ್ಕೆ ಮಾರಕವಾಗಬಾರದು. ಸಾಹಿತ್ಯ, ಸಂಗೀತ, ಅಭಿನಯದಂತಹ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಬಾಲ್ಯದಲ್ಲೇ ಗುರುತಿಸಿ, ಅವರ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛದ್ಮವೇಷ, ಭಾವಗೀತೆ, ದೇಶಭಕ್ತಿ ಗೀತೆ, ಕನ್ನಡ ಮತ್ತು ಹಿಂದಿ ಕಂಠಪಾಠ ಸೇರಿದಂತೆ 11ಕ್ಕೂ ಅಧಿಕ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಎ. ಗಂಗಾಧರ, ಎನ್‌ಪಿಎಸ್ ರಾಜ್ಯಾಧ್ಯಕ್ಷ ಎಂ.ಎ. ನಾಗನಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನಮಲ್ಲಯ್ಯ ಶಾಸ್ತ್ರಿ, ಸಂಘದ ತಾಲ್ಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತ, ಪ್ರಧಾನ ಕಾರ್ಯದರ್ಶಿ ಎಚ್. ಜಡೆಪ್ಪ, ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ, ಸಿಇಒ ಎಂ. ರೇವಣ್ಣ, ಉಪಪ್ರಾಚಾರ್ಯೆ ಸುಜಾತಾ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಎ.ಎಸ್. ಭೂಮೇಶ್ವರ, ಪ್ರಭಾಕರ, ಕರುಣಾಕರ, ಶಿಕ್ಷಕರಾದ ರಮೇಶ ಸುಗ್ಗೇನಹಳ್ಳಿ, ರುದ್ರಪ್ಪ ನಾಯಕ್ ಹಾಗೂ ರೇವಣಸಿದ್ದೇಶ ಉಪಸ್ಥಿತರಿದ್ದರು.






