Kampli | ಕಲಿಕಾ ಹಬ್ಬ, ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪೂರಕ: ರಾಮಲಿಂಗಪ್ಪ
‘ಪ್ರತಿಭಾ ಕಾರಂಜಿ’, ‘ಕಲಿಕಾ ಹಬ್ಬ’ ಕಾರ್ಯಕ್ರಮ

ಕಂಪ್ಲಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿಯೇ ಸರ್ಕಾರ ಹಮ್ಮಿಕೊಂಡಿರುವ ‘ಕಲಿಕಾ ಹಬ್ಬ’ ಹಾಗೂ ‘ಪ್ರತಿಭೆ ಕಾರಂಜಿ’ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ಆನಂದದಾಯಕವಾಗಿ ಕಲಿಯಲು ಅತ್ಯಂತ ಪೂರಕವಾಗಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು.
ಪಟ್ಟಣದ 21ನೇ ವಾರ್ಡ್‌ನ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಪ್ರತಿಭಾ ಕಾರಂಜಿ’ ಹಾಗೂ ‘ಕಲಿಕಾ ಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸೃಜನಶೀಲ ವಾತಾವರಣವು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದರು.
ಸಿಆರ್‌ಪಿ ಕರುಣಾಕರ ಆಚಾರ್ ಮಾತನಾಡಿ, ಕಲಿಕಾ ಬೋಧನೆಯ ಜೊತೆಗೆ ಆಟೋಟ ಹಾಗೂ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಬ್ಬವು ಮಕ್ಕಳಿಗೆ ಯಾವುದೇ ಹೊರೆ ಅಥವಾ ಒತ್ತಡ ಉಂಟುಮಾಡುವುದಿಲ್ಲ. ಬದಲಿಗೆ, ಆನಂದದಾಯಕ ಚಟುವಟಿಕೆಗಳ ಮೂಲಕ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿವರಿಸಿದರು.
ಸಾಂಸ್ಕೃತಿಕ ಸಂಭ್ರಮ, ಬಹುಮಾನ ವಿತರಣೆ :
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ಕಲಿಕೋತ್ಸವದ ಪ್ರದರ್ಶನಗಳನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಕ್ಕಳಿಂದ ನಡೆದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ, ಈಸಿಟಿ ರೇವಣ್ಣ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ್, ಪ್ರಭಾಕರ್, ಮುಖಂಡರಾದ ಚಂದ್ರಶೇಖರ್, ಆದಿನಾರಾಯಣ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.






