Kampli | ಬಡ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಲು ಸಾಮೂಹಿಕ ವಿವಾಹ ಪೂರಕ: ಮಾಜಿ ಶಾಸಕ ಸುರೇಶ್ ಬಾಬು
2ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ

ಕಂಪ್ಲಿ: ಬಡ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಪೂರಕವಾಗಿವೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಹಕಾರ ಸದಾ ಇರಲಿದೆ ಎಂದು ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಹೇಳಿದರು.
ಪಟ್ಟಣದ ಲಡ್ಡು ಶಾದಿ ಮಹಲ್‌ನಲ್ಲಿ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಮುಸ್ಲಿಂ ಅಭಿವೃದ್ಧಿ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಬಡ ಕುಟುಂಬಗಳ ಶುಭ ಸಮಾರಂಭಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾವು ಶಾಸಕರಾಗಿದ್ದ ಅವಧಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿವೇಶನ ಕೊಡಿಸಲಾಗಿತ್ತು. ಇಂದು ಆ ನಿವೇಶನದ ಮೌಲ್ಯ ಕೋಟ್ಯಂತರ ರೂಪಾಯಿಗಳಷ್ಟಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿರಾಜ್ ಶೇಖ್ ಮಾತನಾಡಿ, ಆಡಂಬರದ ಮದುವೆಗಳಿಗೆ ಅನಗತ್ಯವಾಗಿ ಹಣ ವೆಚ್ಚ ಮಾಡುವ ಬದಲು ಸಾಮೂಹಿಕ ವಿವಾಹದ ಮೊರೆ ಹೋಗುವುದು ಉತ್ತಮ ನಡೆ. ನವದಂಪತಿಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಖ್ವಾಜಾ ಮೈನುದ್ದೀನ್ ಖಾದ್ರಿ ಹಾಗೂ ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ ಅವರ ಸಾನ್ನಿಧ್ಯದಲ್ಲಿ 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಐ. ಹೊನ್ನೂರ್ ಸಾಬ್, ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖಂಡರಾದ ಬಾಲೆಸಾಬ್, ಎಂ.ಡಿ. ಯಾಸೀನ್, ರಾಜಾಸಾಬ್, ಸೈಯದ್ ಬಾಬು ಸಾಬ್, ಎಂ. ರಾಜಾಭಕ್ಷಿ, ಹಾಫಿಜ್ ಅಲ್ಲಾಬಕ್ಷಿ, ಎಂ.ಡಿ. ಯೂನೂಸ್, ಟಿ. ಹುಸೇನ್ ಬಾಷಾ, ಕರೀಂಸಾಬ್ ಹಾಗೂ ಬಡಿಗೇರ ಜಿಲಾನಸಾಬ್ ಪಾಲ್ಗೊಂಡಿದ್ದರು.






