ಕಂಪ್ಲಿ | ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಗಳಿಂದ ದಾಳಿ

Photo credit: PTI
ಕಂಪ್ಲಿ: ಪುರಸಭೆ ವ್ಯಾಪ್ತಿಯ 10ನೇ ವಾರ್ಡು ಹರಿಜನಕೇರಿ ಪ್ರದೇಶದಲ್ಲಿ ಮಗುವಿಗೆ ಬೀದಿ ನಾಯಿ ಕಡಿದಿದ್ದು, ಮಗುವಿನ ಕಿವಿ, ತುಟಿ ಸೇರಿದಂತೆ ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯಗಳಾಗಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಗೆ ದಾಖಲಿಸಲಾಗಿದೆ.
ಕಂಪ್ಲಿ: ಪುರಸಭೆ ವ್ಯಾಪ್ತಿಯ 10ನೇ ವಾರ್ಡಿನ ಹರಿಜನಕೇರಿ ಪ್ರದೇಶದಲ್ಲಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿರುವ ಘಟನೆ ನಡೆದಿದೆ.
ನಾಯಿಗಳ ಕಡಿತದಿಂದ ಮಗುವಿನ ಕಿವಿ ಹಾಗೂ ತುಟಿಗಳು ಸಂಪೂರ್ಣವಾಗಿ ಹರಿದು ಹೋಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಭಾನುವಾರ ಸಿ.ಎಸ್. ಅಕ್ಷತಾ ಎನ್ನುವ ಮಗು ತನ್ನ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಏಕಾಏಕಿ ನುಗ್ಗಿದ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ಮರಣಾಂತಿಕ ದಾಳಿ ಮಾಡಿವೆ. ಕೂಡಲೇ ಮಗುವನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ರವಾನಿಸಲಾಗಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಮಗುವಿನ ಕಿವಿ ಮತ್ತು ತುಟಿಗಳಿಗೆ ಹೊಲಿಗೆ ಹಾಕಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಗು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಮಗುವಿನ ತಾತ ಸಿ.ಎಸ್.ವಿರೂಪಾಕ್ಷಿ ಕಣ್ಣೀರಿಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬವು ಚಿಕಿತ್ಸಾ ವೆಚ್ಚ ಭರಿಸಲು ಪರದಾಡುತ್ತಿದ್ದು, ಸರ್ಕಾರ ತಕ್ಷಣವೇ ಮಗುವಿನ ಚಿಕಿತ್ಸೆಗೆ ನೆರವು ಹಾಗೂ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಈ ಹಿಂದೆಯೂ ಹಲವಾರು ಮಕ್ಕಳು ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಪುರಸಭೆ ಆಡಳಿತವು ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿ.ಎಸ್. ವಿರೂಪಾಕ್ಷಿ, ಸಿ.ಎಸ್. ಚೆನ್ನಯ್ಯ ಹಾಗೂ ಇತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







