Kampli | ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಕಂಪ್ಲಿ: ಶಾಲಾ-ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ನಿಲುಗಡೆ ನೀಡದೆ ತೆರಳುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ತಾಲ್ಲೂಕಿನ ನೆಲ್ಲುಡಿ ಕೊಟ್ಟಾಲ್ ಬಳಿಯ ಕುರುಗೋಡು-ಕಂಪ್ಲಿ ಮುಖ್ಯರಸ್ತೆಯಲ್ಲಿ ಗುರುವಾರ ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂ. 2 ಮುದ್ದಾಪುರ ಗ್ರಾಮಕ್ಕೆ ದಿನ ಬಿಟ್ಟು ದಿನ ಬಸ್ ಸಂಚರಿಸುತ್ತಿರುವುದರಿಂದ ನಿತ್ಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಸ್ ಬಾರದ ದಿನಗಳಲ್ಲಿ ವಿದ್ಯಾರ್ಥಿಗಳು ಮುದ್ದಾಪುರದಿಂದ ದೂರದ ನೆಲ್ಲುಡಿ ಕ್ರಾಸ್ವರೆಗೆ ನಡೆದುಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಶಂಕರ್ಸಿಂಗ್ ಕ್ಯಾಂಪ್ ರಸ್ತೆಯ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾದರೂ ಬಸ್ಗಳು ಬರುವುದಿಲ್ಲ. ಅಪರೂಪಕ್ಕೆ ಬಸ್ ಬಂದರೂ, ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರಿಂದ ಬಸ್ ಭರ್ತಿಯಾಗಿದೆ ಎಂಬ ಕಾರಣ ನೀಡಿ ಚಾಲಕರು ನಿಲುಗಡೆ ನೀಡದೆ ಮುಂದೆ ಸಾಗುತ್ತಾರೆ. ಇದರಿಂದ ಕಂಪ್ಲಿ, ಕುರುಗೋಡು, ಬಳ್ಳಾರಿ, ಹೊಸಪೇಟೆ ಹಾಗೂ ಗಂಗಾವತಿಯ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆಯೂ ಸಕಾಲಕ್ಕೆ ಬಸ್ ಸಿಗದೆ ರಾತ್ರಿ ತಡವಾಗಿ ಮನೆಗೆ ತಲುಪುವಂತಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.
ಬಿ. ಶಿವಾನಂದ, ಬಿ. ಸುಧೀರ್, ವಿಜಯಕುಮಾರ, ಸುನೀಲ, ನಂದಿನಿ, ಸ್ವಪ್ನ, ಸಂಜನಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






