ಕಂಪ್ಲಿ ವಲಯ 1ರ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ಷಾಮಿಯಾಚಂದ್ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಬಳ್ಳಾರಿ ಶಿಕ್ಷಣ ಇಲಾಖೆ, ಕುರುಗೋಡು ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ಕಂಪ್ಲಿ ವಲಯ 1ರ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಎರಡು ದಿನದ ಕ್ರೀಡಾಕೂಟಗಳು ಸೋಮವಾರ ಆರಂಭಗೊಂಡವು.
ಇಲ್ಲಿನ ಷಾಮಿಯಾಚಂದ್ ಶಾಲಾ ಆವರಣದಲ್ಲಿ ನಡೆದ ಕ್ರೀಡಾಕೂಟಕ್ಕೆ ಎನ್‌ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಇಸಿಒ ರೇವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಇವರು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಿದರು.
ಕ್ರೀಡಾಕೂಟದ ಕಾರ್ಯದರ್ಶಿ ರಮೇಶ ಶಿವಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿನ ಕ್ರೀಡಾಕೂಟದಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಹೊರ ಹಾಕುವ ಮೂಲಕ ಮುಂದಿನ ಹಂತಕ್ಕೆ ತಲುಪುವದೊಂದಿಗೆ ತಾಲೂಕಿನ ಕೀರ್ತಿ ಪತಾಕಿ ಹಾರಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲು-ಗೆಲುವು ಎನ್ನದೇ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಗೆ ಕೊನೆ ಇಲ್ಲ ಎಂದರು.
ಎಸ್‌ಎನ್‌ಪೇಟೆ, 8ನೇ ವಾರ್ಡ್ ಕ್ಲಸ್ಟರಿನ ಶಾಲಾ ಮಕ್ಕಳು ಕಬಡ್ಡಿ, ಖೋ ಖೋ, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜಡೆಪ್ಪ, ಜೋಗಿ ರುದ್ರಪ್ಪನಾಯಕ್, ಕ್ರೀಡಾಕೂಟದ ಅಧ್ಯಕ್ಷ ವೆಂಕಟರಮಣ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಗಂಗಾಧರ, ಕರುಣಾಕರ, ಪ್ರಭಾಕರ ಸೇರಿದಂತೆ ಶಿಕ್ಷಕ ವೃಂದದವರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.






