ನ.11ರಂದು ಸಂಡೂರಿನಲ್ಲಿ ಕನ್ನಡ ಭವನ ಉದ್ಘಾಟನೆ : ಬಿ.ನಾಗನಗೌಡ

ಸಂಡೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರ್ಮಿಸಿರುವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ನೂತನ ಸಭಾಭವನ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ನವೆಂಬರ್ 11ರಂದು ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ತಿಳಿಸಿದರು.
ಪಟ್ಟಣದ ಬಿ.ಕೆ.ಜಿ. ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಸಂಡೂರಿನ ಸರ್ವೆ ನಂ. 412/ಬಿ ಅಡಿಯಲ್ಲಿ ಭವನ ನಿರ್ಮಾಣಕ್ಕಾಗಿ 11,731 ಚದರ ಅಡಿ ನಿವೇಶನ ಮಂಜೂರಾಗಿತ್ತು. ನಿಗದಿತ ಅವಧಿಯಲ್ಲಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಬಡ್ಡಿ ಸಹಿತ ಒಟ್ಟು 10 ಲಕ್ಷ ರೂ. ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಾವತಿಸಿ, 2021ರ ಏಪ್ರಿಲ್ 22ರಂದು ನಿವೇಶನವನ್ನು ನೋಂದಣಿ ಮಾಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 1.60 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಟ್ಟಡದ ಮೇಲ್ಛಾವಣಿಯಲ್ಲಿ ಸಭಾಭವನ ನಿರ್ಮಿಸಲು 1.20 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿ, ಅನುದಾನ ಬಿಡುಗಡೆ ಮಾಡಿಸಲಾಗಿದೆ. ಕಚೇರಿ ಹಾಗೂ ಸಭಾಭವನಕ್ಕೆ ಅಗತ್ಯವಿರುವ ಪೀಠೋಪಕರಣಗಳಿಗಾಗಿ 75 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಈಗಾಗಲೇ 500 ಕುರ್ಚಿಗಳು, ಕಚೇರಿ ಮೇಜುಗಳು, ವೇದಿಕೆಯ ಕುರ್ಚಿಗಳು ಹಾಗೂ ಅಲ್ಮೇರಾಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.
ಕೆ.ವಿ. ನಾರಾಯಣ ಅವರಿಗೆ ಶ್ರದ್ಧಾಂಜಲಿ: ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಹಾಗೂ ಶಾಸ್ತ್ರಾಭ್ಯಾಸಿ ಕೆ.ವಿ. ನಾರಾಯಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಪದಾಧಿಕಾರಿಗಳಾದ ಸಿ.ಎಂ. ಶಿಗ್ಗಾವಿ, ಜಿ. ವೀರೇಶ್ ಹಾಗೂ ರಾಥೋಡ್ ಚಂದ್ರಶೇಖರ್ ಉಪಸ್ಥಿತರಿದ್ದರು.






