ಕುರುಗೋಡು | ವಿವಿಧ ಗ್ರಾಮ ಪಂಚಾಯತ್ ಗಳಿಗೆ ಕೇಂದ್ರ ಮಾನಿಟರಿಂಗ್ ಅಧಿಕಾರಿಗಳು ಭೇಟಿ

ಬಳ್ಳಾರಿ : ಕುರುಗೋಡು ತಾಲ್ಲೂಕಿನ ಕೋಳೂರು ಹಾಗೂ ಓರ್ವಾಯಿ ಗ್ರಾಮ ಪಂಚಾಯತ್ ಗಳಿಗೆ ಕೇಂದ್ರ ಮಾನಿಟರಿಂಗ್ (ಎನ್‌ಎಲ್‌ಎಂ) ಅಧಿಕಾರಿಗಳಾದ ಡಾ.ದಯಾಕರ ರೆಡ್ಡಿ ಹಾಗೂ ಚೂಡಾಮಣಿ ರೆಡ್ಡಿ ತಂಡವು ಇತ್ತೀಚೆಗೆ ಭೇಟಿ ನೀಡಿ, ವಿವಿಧ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ ಸಾಮಾಗ್ರಿ ಆಧಾರಿತ ಕಾಮಗಾರಿಗಳಾದ ಗ್ರಾಮ ಪಂಚಾಯತ್ ಕಟ್ಟಡ, ಎನ್‌ಆರ್‌ಎಲ್‌ಎನ್ ಶೆಡ್, ಮೆಟಲ್ ರಸ್ತೆ, ದನಗಳ ಶೆಡ್‌ಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ನಿರ್ಮಾಣ ಹಂತದ ಮನೆಗಳು, ಮನರೇಗಾ ಯೋಜನೆಯಡಿ ಕಾಲುವೆ ಹೂಳು ತೆಗೆಯುವ ಕಾಮಗಾರಿ, ಸಾಮಾಜಿಕ ಅರಣ್ಯ ವಲಯದ ಮನರೇಗಾ ಯೋಜನೆಯಡಿ ಕಳೆದ ವರ್ಷ ಪೂರ್ಣಗೊಂಡ ಕಾಮಗಾರಿ, ತೋಟಗಾರಿಕೆ ಇಲಾಖೆಯ ಮನರೇಗಾ ಯೋಜನೆಯಡಿ ವೈಯಕ್ತಿಕ ದಾಳಿಂಬೆ ಕಾಮಗಾರಿ, ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಮದಿರೆ ಗ್ರಾಮದಿಂದ ವದ್ದಟ್ಟಿ ಗ್ರಾಮದವರೆಗೆ ಮುಖ್ಯ ರಸ್ತೆಯವರೆಗೆ ನಿರ್ಮಾಣ ಮಾಡಲಾಗಿರುವ ಡಾಂಬಾರ್ ರಸ್ತೆಗಳು ಸೇರಿದಂತೆ ಮನರೇಗಾ ಯೋಜನೆಯಡಿ 7 ವಹಿ ಹಾಗೂ ಇನ್ನೀತರ ಸ್ಥಳಗಳನ್ನು ಪರಿಶೀಲಿಸಿದರು.
ಈ ವೇಳೆ ಎನ್‌ಆರ್‌ಎಲ್‌ಎನ್ ಸ್ವಸಹಾಯ ಸಂಘದ ಕುರಿತು ಹಾಗೂ ಸ್ವಸಹಾಯ ಸಂಘದ ಕಾರ್ಯಚಟುವಟಿಕೆಗಳ ಕುರಿತು ಸಂಘದ ಪ್ರತಿನಿಧಿಗಳ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ವಿ.ನಿರ್ಮಲ, ತಾಪಂ ಸಹಾಯಕ ನಿರ್ದೇಶಕ ಪಿ.ಶಿವರಾಮರೆಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಜುಭೇದ, ತಿಮ್ಮಪ್ಪ, ಗ್ರಾಮ ಲೆಕ್ಕಾಧಿಕಾರಿ ಮಾರುತಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ರಾಘವೇಂದ್ರ, ಕಿರಣ್, ಸಾಮಾಜಿಕ ಅರಣ್ಯ ಅಧಿಕಾರಿ ಸಿರಾ ಬಡೀಗಿ, ಕುರುಗೋಡು ತಾಪಂ ತಾಂತ್ರಿಕ ಐಇಸಿ ಸಂಯೋಜಕ ಚಂದ್ರಶೇಖರ, ತಾಂತ್ರಿಕ ಸಹಾಯಕರಾದ ರ‍್ರಿಸ್ವಾಮಿ, ಚೆಲ್ಲಾ ಲೋಕೆಶ್ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.







