ವಕೀಲರ ಹಿತರಕ್ಷಣಾ ಕಾಯ್ದೆ ಬಲಪಡಿಸಲು ಆಗ್ರಹಿಸಿ ಸಂಡೂರಿನಲ್ಲಿ ವಕೀಲರ ಪ್ರತಿಭಟನೆ

ಸಂಡೂರು: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ, ವಕೀಲರ ವೃತ್ತಿಪರ ಸುರಕ್ಷತೆಗಾಗಿ ಸಮಗ್ರ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಬಲಪಡಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಸಂಡೂರು ತಾಲೂಕು ವಕೀಲರ ಸಂಘದ ಸದಸ್ಯರು ಮಂಗಳವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಗಳನ್ನು ಖಂಡಿಸಿ ರಾಜ್ಯಾದ್ಯಂತ ವಕೀಲರ ಸಂಘಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಭಾಗವಾಗಿ ಸಂಡೂರಿನ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ, ವಕೀಲರ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸಮಗ್ರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ವಕೀಲರು ನಿರ್ಭೀತಿಯಿಂದ ತಮ್ಮ ವೃತ್ತಿ ಹಾಗೂ ಕರ್ತವ್ಯಗಳನ್ನು ನಿರ್ವಹಿಸಲು ಸೂಕ್ತ ಭದ್ರತೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಜನಸಾಮಾನ್ಯರು ಹಾಗೂ ವಿವಿಧ ಇಲಾಖೆಗಳ ಮಟ್ಟದಲ್ಲಿ ವಕೀಲರ ಮೇಲೆ ನಡೆಯುವ ಹಲ್ಲೆ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು. ವಕೀಲರ ಹಿತಾಸಕ್ತಿ ಹಾಗೂ ಜೀವದ ಸುರಕ್ಷತೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಸಂಡೂರು ತಾಲೂಕು ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಡೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷೆ ರೇಖಾ ಜಿ., ಕಾರ್ಯದರ್ಶಿ ರಾಮಮೂರ್ತಿ ಎಸ್., ಜಂಟಿ ಕಾರ್ಯದರ್ಶಿ ಉಮರ್ ಫಾರೂಕ್ ಎಸ್., ಖಜಾಂಚಿ ಹುಚ್ಚಪ್ಪ ಕೆ., ನಾಗರಾಜ್, ಬಸವರಾಜ್ ಡಿ., ಸತ್ಯನಾರಾಯಣ ಮಾಸ್ತಿ ಸೇರಿದಂತೆ ಸಂಘದ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.






