ಬಳ್ಳಾರಿಯಲ್ಲಿ ಸಂಭ್ರಮದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ

ಬಳ್ಳಾರಿ: ನಗರದ ವಾಲ್ಮೀಕಿ ವೃತ್ತ (ಎಸ್.ಪಿ. ವೃತ್ತ)ದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ವೃತ್ತದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ನಲ್ಲಚೇರು ಪ್ರದೇಶದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ವಿನ್ಯಾಸದಲ್ಲಿ ಪುತ್ಥಳಿ ರೂಪುಗೊಳ್ಳಲಿದೆ. ಈ ಶಿಲ್ಪ ಅನಾವರಣ ದಿನದಂದು ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಜನರನ್ನು ಒಗ್ಗೂಡಿಸಿ ಅದ್ದೂರಿ ಸಮಾರಂಭ ಆಯೋಜಿಸಲಾಗುವುದು ಎಂದರು.
ಅದೇ ವೇಳೆ, ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪನೆಗೆ ಎರಡು ಎಕರೆ ಭೂಮಿ ವೈಯಕ್ತಿಕವಾಗಿ ನೀಡುವುದಾಗಿ ಶಾಸಕ ರೆಡ್ಡಿ ಘೋಷಿಸಿದರು.
ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ದೇಶದ ಸರ್ವಶ್ರೇಷ್ಠ ಗ್ರಂಥಗಳಲ್ಲಿ ಒಂದು. ಒಟ್ಟು 24,000 ಶ್ಲೋಕಗಳಿರುವ ಈ ಕೃತಿ ಭಾರತದ ಸಾಂಸ್ಕೃತಿಕ ಆಧಾರಶಿಲೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಸಮುದಾಯ ಸಬಲೀಕರಣ ಸಾಧನೆಯಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.
ಮಹಾಪೌರ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಪ್ರಾಧ್ಯಾಪಕ ಡಾ.ವೀರಭದ್ರಪ್ಪ ತಂಬ್ರಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 2024–25ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವೀಧರರು, ಕೃಷಿ ಮತ್ತು ಕಲೆ ಕ್ಷೇತ್ರದ ಸಾಧಕರು ಸನ್ಮಾನಿಸಲ್ಪಟ್ಟರು.
ಜಯಂತಿ ಅಂಗವಾಗಿ ನಗರದ ಎಸ್.ಪಿ. ವೃತ್ತ ಹಾಗೂ ವಾಲ್ಮೀಕಿ ಭವನದಲ್ಲಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಗೆ ಜಿಲ್ಲಾಡಳಿತದಿಂದ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆಗೈಯಲಾಯಿತು.
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯು ನಗರದ ಎಸ್.ಪಿ. ವೃತ್ತದಿಂದ ಆರಂಭವಾಗಿ ಕನಕದುರ್ಗಮ್ಮ ದೇವಸ್ಥಾನ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೆಯ ಬ್ರೂಸ್ ಪೇಟೆ ಪೊಲೀಸ್ ಠಾಣೆ, ಜೈನ್ ಮಾರ್ಕೆಟ್ ರಸ್ತೆ, ಹೆಚ್.ಆರ್.ಗವಿಯಪ್ಪ ವೃತ್ತ, ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಮುಂಭಾಗದಿಂದ ವಾಲ್ಮೀಕಿ ಭವನದವರೆಗೆ ಸಾಗಿತು.
ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಬೆಳ್ಳಿರಥ, ರಾಮಾಯಣ ಕಥಾಪಾತ್ರಗಳ ವೇಷಧಾರಿಗಳು, ಡೊಳ್ಳು ಕುಣಿತ, ತಾಷೆ ರಾಂಡೋಲ್ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.







