ಸಂಡೂರು ಕ್ಷೇತ್ರದಲ್ಲಿ 935.46 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಈ ಅನ್ನಪೂರ್ಣ ಚಾಲನೆ

ಸಂಡೂರು/ಬಳ್ಳಾರಿ : ಸಂಡೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಶಾಸಕ ಈ. ಅನ್ನಪೂರ್ಣ ಅವರು ವಿವಿಧ ಗ್ರಾಮಗಳಲ್ಲಿ ರಸ್ತೆ, ಸೇತುವೆ, ಶಾಲಾ ಕೊಠಡಿ, ಬಸ್ ನಿಲ್ದಾಣ, ಹೈಮಾಸ್ಟ್ ಲೈಟ್ ಹಾಗೂ ಗ್ರಂಥಾಲಯ ಕಾಮಗಾರಿಗಳ ಭೂಮಿಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಶಾಸಕರು, ಶಿಕ್ಷಣ, ರಸ್ತೆ ಸಂಪರ್ಕ, ಸಾರ್ವಜನಿಕ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ನಿಡುಗುರ್ತಿಯಲ್ಲಿ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ :
ನಿಡುಗುರ್ತಿ ಗ್ರಾಮದಿಂದ ಸ್ಮಶಾನ ಹಾಗೂ ಯಶವಂತನಗರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
72-ಮಲ್ಲಾಪುರ ಶಾಲೆಗೆ ಹೊಸ ಕೊಠಡಿ :
72-ಮಲ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 16.53 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಶಾಲಾ ಕೊಠಡಿಯನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಕುರಿತು ಸಾರ್ವಜನಿಕರು ಶಾಸಕರ ಗಮನ ಸೆಳೆದಿದ್ದು, ಕೂಡಲೇ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಂಡಾಪುರದಲ್ಲಿ ಬಸ್ ನಿಲ್ದಾಣ ನಿರ್ಮಾಣ :
ಕೊಂಡಾಪುರ ಗ್ರಾಮದಲ್ಲಿ 10 ಲಕ್ಷ ರೂ. CSR ಅನುದಾನದಡಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರಿಗೆ ಸುರಕ್ಷಿತ ಹಾಗೂ ಅನುಕೂಲಕರ ಸಾರಿಗೆ ಸೌಲಭ್ಯ ಒದಗಿಸುವುದು ಇದರ ಉದ್ದೇಶವಾಗಿದೆ.
ಗಿರೇನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ :
ಗಿರೇನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ-50 ಸಂಪರ್ಕಿಸುವ ರಸ್ತೆಯ ವಿವಿಧ ಭಾಗಗಳಲ್ಲಿ ಸೇತುವೆ ಅಪ್ರೋಚ್ ರಸ್ತೆ ಹಾಗೂ ಪ್ರೊಟೆಕ್ಷನ್ ವರ್ಕ್ಸ್ ಕಾಮಗಾರಿಗಳಿಗೆ 1.50 ಕೋಟಿ ರೂ. ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಹುಲಿಕುಂಟೆಯಲ್ಲಿ ಉಪ ಗ್ರಂಥಾಲಯ :
73-ಹುಲಿಕುಂಟೆ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲಾದ ಉಪ ಗ್ರಂಥಾಲಯ ಕೇಂದ್ರವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಇದು ನೆರವಾಗಲಿದೆ ಎಂದು ತಿಳಿಸಲಾಯಿತು.
ಉತ್ತರಮಲೈ ಶಾಲೆಗೆ ಹೊಸ ಕೊಠಡಿ :
ಉತ್ತರಮಲೈ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 16.53 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಜಗದೀಶ್, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹಲವು ಗ್ರಾಮಗಳಿಗೆ ಹೈಮಾಸ್ಟ್ ಲೈಟ್ :
ನಿಡುಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ KRIDL ವತಿಯಿಂದ 47.25 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ಲೈಟ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೆಳಕು ಹಾಗೂ ಭದ್ರತಾ ವ್ಯವಸ್ಥೆ ಸುಧಾರಣೆಯಾಗಲಿದೆ.
ಬಂಡ್ರಿಯಲ್ಲಿ ಶಾಲಾ ಅಭಿವೃದ್ಧಿ :
ಬಂಡ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 5 ಶಾಲಾ ಕೊಠಡಿಗಳ ಕಾಮಗಾರಿಯನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಮತ್ತೊಂದು 99.15 ಲಕ್ಷ ರೂ. ವೆಚ್ಚದ 5 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಲಾಯಿತು.
ಕೆ.ಗೊಲ್ಲರಹಟ್ಟಿಯಲ್ಲಿ ರಸ್ತೆ ಮತ್ತು ಶಾಲಾ ಕಾಮಗಾರಿ :
ಕೆ.ಗೊಲ್ಲರಹಟ್ಟಿ ಗ್ರಾಮದಿಂದ ಗೋನಾಳ್ ಮೂಲಕ ಬಂಡ್ರಿ ಅಂಕಮ್ಮನಾಳ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಜೊತೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 58 ಲಕ್ಷ ರೂ. ವೆಚ್ಚದಲ್ಲಿ 4 ಶಾಲಾ ಕೊಠಡಿಗಳ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು.
ಕೋಡಿಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ :
ಕೋಡಿಹಳ್ಳಿ ಗ್ರಾಮದಿಂದ ಬಂಡ್ರಿ ಗ್ರಾಮದ ಕೆರೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ CMIDP ಯೋಜನೆಯಡಿ 40 ಲಕ್ಷ ರೂ. ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
ಹೆಚ್.ಕೆ ಹಳ್ಳಿಯಲ್ಲಿ 10 ಶಾಲಾ ಕೊಠಡಿಗಳ ಉದ್ಘಾಟನೆ :
ಹೆಚ್.ಕೆ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1.81 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 10 ಶಾಲಾ ಕೊಠಡಿಗಳ ಕಾಮಗಾರಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಈ. ಅನ್ನಪೂರ್ಣ ಅವರು, “ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ನಮ್ಮ ಪ್ರಮುಖ ಗುರಿಯಾಗಿದೆ. ರಸ್ತೆ, ಶಿಕ್ಷಣ, ಬೆಳಕು, ಸಾರಿಗೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಿಡಿಪಿಒ ನಾಗರಾಜ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಡಿಗಿನ ಬಸಪ್ಪ, ಜಯರಾಮ್, ವೀರೇಶ್ ಸ್ವಾಮಿ, ಚಟ್ನಿ ಖಾಸಿಂಪೀರ, ಪಿಎಸ್ಐ ಮುದ್ದುರಂಗಸ್ವಾಮಿ, ಬಿಆರ್‌ಪಿ ಕಾರ್ತಿಕ್, ಮುಖ್ಯಗುರು ನಾಗಪ್ಪ ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.






