ನವಿಲೆ ಸಮಾನಾಂತರ ಜಲಾಶಯದ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸಬೇಕು : ಶಾಸಕ ವೈ.ಎಂ.ಸತೀಶ್

ಬಳ್ಳಾರಿ(ಡಿ.12): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ತುಂಗಭದ್ರ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಜಲಾಶಯ ನಿರ್ಮಾಣಕ್ಕಾಗಿ 1,000 ಕೋಟಿ ರೂಪಾಯಿ ಅನುದಾನವನ್ನು ಮೀಸಲು ನೀಡಿದ್ದರು. ನವಿಲೆ ಸಮಾನಾಂತರ ಜಲಾಶಯದ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಶಾಸಕ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.
ಬೆಳಗಾವಿಯ `ಸುವರ್ಣ ಸೌಧ'ದಲ್ಲಿ ಶುಕ್ರವಾರ ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ವೈ.ಎಂ. ಸತೀಶ್, ತುಂಗಭದ್ರ ಜಲಾಶಯಕ್ಕೆ ನವಿಲೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ ಭವಿಷ್ಯದಲ್ಲಿ ಅಕಾಲಿಕ ಮಳೆ ಮತ್ತು ನೀರಾವರಿಗೆ ನೀರಿನ ಕೊರತೆ ಆಗುವ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಆದರೆ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ - ಸಿರುಗುಪ್ಪ ಮತ್ತು ವಿಜಯನಗರ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ 6 ರಿಂದ 7 ಟಿಎಂಸಿ (6.80 ಟಿಎಂಸಿ) ಪ್ರಮಾಣದ ನೀರನ್ನು ಹರಿಸಲು ಸಾಧ್ಯವಿತ್ತು. ಆದರೆ, ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸಂಡೂರು ತಾಲೂಕಿನಲ್ಲಿ ಕೆರೆ ತುಂಬಿಸುವ ಕೆಲಸವನ್ನು ಮಾಡಬೇಕಿದೆ. ಪಾವಗಡಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಬರುವ ಕೊಟ್ಟೂರಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಕಂಪ್ಲಿಯಲ್ಲಿ ಭಾಗಶಃ ಕೆರೆ ತುಂಬಿಸುವ ಕೆಲಸ ಮಾಡಬೇಕು. ನೀರು ನಿರ್ವಹಣೆ ಮತ್ತು ಸಂರಕ್ಷಣೆ ಕುರಿತು ಜನಸಾಮಾನ್ಯರಿಗೆ - ರೈತರಿಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಕೃಷಿ ಸಂಕಷ್ಟಕ್ಕೆ ಗುರಿಯಾಗಿ, ರೈತರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತುಂಗಭದ್ರ ಜಲಾಶಯಕ್ಕೆ ಸಮಾನಾಂತರವಾಗಿ ನವಿಲೆ ಸಮಾನಾಂತರ ಜಲಾಶಯವನ್ನು ತ್ವರಿತವಾಗಿ ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು ಎಂದು ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.







