ಜೂ.28ರಿಂದ ಸಂಡೂರಿನಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

ಸಂಡೂರು/ಬಳ್ಳಾರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ತಹಸಿಲ್ದಾರ್ ಅನಿಲ್ ಕುಮಾರ್ ಕೆ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ, ಜೆಸ್ಕಾಂ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಕರು ಭಾಗವಹಿಸಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ದೇಶ, ಮಹತ್ವ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದ ಅಗತ್ಯತೆಯ ಕುರಿತು ವಿವರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಂದು ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ತಹಶೀಲ್ದಾರ್ ಅನಿಲ್ ಕುಮಾರ್ ಕೆ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜೂನ್ 28ರಿಂದ ಜುಲೈ 1ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. ಯಾವುದೇ ಅಡಚಣೆ ಉಂಟಾಗದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ವತಿಯಿಂದ ಸಂಡೂರು ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಒಳಗೊಂಡಂತೆ ಒಟ್ಟು 203 ಪಲ್ಸ್ ಪೋಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ, ಪ್ರಯಾಣಿಕರ ಮಕ್ಕಳ ಅನುಕೂಲಕ್ಕಾಗಿ ಸಂಡೂರು ಬಸ್ ನಿಲ್ದಾಣ, ತೋರಣಗಲ್ಲು ರೈಲು ನಿಲ್ದಾಣ ಹಾಗೂ ಚೋರ್ನೂರು ಬಸ್ ನಿಲ್ದಾಣಗಳಲ್ಲಿ ವಿಶೇಷ ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗುತ್ತದೆ.
ಈ ಅಭಿಯಾನದಡಿ ಸಂಡೂರು ತಾಲೂಕಿನಾದ್ಯಂತ 35,818 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹುಟ್ಟಿದ ಮಗುವಿನಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳನ್ನು ಸಮೀಪದ ಪಲ್ಸ್ ಪೋಲಿಯೋ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದ ಪೂರ್ವಸಿದ್ಧತೆಗಳು ಹಾಗೂ ಸಮನ್ವಯ ಕ್ರಮಗಳ ಕುರಿತು ಚರ್ಚಿಸಿದರು. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಇಲಾಖೆಗಳು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.






