ಬಳ್ಳಾರಿಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಕ

ಬಳ್ಳಾರಿ, ಜ.7: ಬಳ್ಳಾರಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸುಮನ್ ಡಿ. ಪೆನ್ನೇಕರ್ ನೇಮಕಗೊಂಡಿದ್ದಾರೆ.
ಬಳ್ಳಾರಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಮಾನತುಗೊಂಡಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅವರ ಸ್ಥಾನಕ್ಕೆ ಸುಮನ್ ಡಿ. ಪೆನ್ನೇಕರ್ ರನ್ನು ನೇಮಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದವರಾದ ಸುಮನ್ ಡಿ. ಪೆನ್ನೇಕರ್, 2013ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು ವೃತ್ತಿಯಿಂದ ವೈದ್ಯರೂ (BAMS) ಹೌದು. ಈ ಮೊದಲು ಬೆಂಗಳೂರು ನಗರದ ಡಿಸಿಪಿ (ಗುಪ್ತದಳ) ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಮನ್ ಡಿ. ಪೆನ್ನೇಕರ್ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ದಳದ (SIT) ಪ್ರಮುಖ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಎಸ್ಪಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಹಿಂದೆ ಕೊಡಗು ಜಿಲ್ಲೆಯ ಎಸ್ಪಿಯಾಗಿ ಹಾಗೂ ಬೆಂಗಳೂರಿನ ಸಂಚಾರಿ ವಿಭಾಗದ ಡಿಸಿಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.





