ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಚಿತ: ಪ್ರೊ.ಹೆಚ್ ತಿಪ್ಪೇಸ್ವಾಮಿ

ಸಂಡೂರು : ವಿದ್ಯಾರ್ಥಿಗಳು ಎದೆಗುಂದದೆ ನಿರಂತರವಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಹೆಚ್. ತಿಪ್ಪೇಸ್ವಾಮಿ ಹೇಳಿದರು.
ಸಂಡೂರು ತಾಲೂಕಿನ ನಂದಿಹಳ್ಳಿಯ ಜ್ಞಾನಸರೋವರದ ನೆಹರೂ ಸಭಾಂಗಣದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕನ್ನಡ ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗಗಳ ಸಹಯೋಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಯುಜಿಸಿ ನೆಟ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ನಿರಂತರ ಅಧ್ಯಯನ, ಶಿಸ್ತುಬದ್ಧ ತಯಾರಿ ಹಾಗೂ ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಮಾತನಾಡಿ, ನಿರಂತರ ಅಧ್ಯಯನದಿಂದ ಸಾಧನೆ ಸಾಧ್ಯ. ಗುರುಗಳ ಮಾರ್ಗದರ್ಶನದಲ್ಲಿ ಗುರಿ ತಲುಪಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬೇಕು. ಪುಸ್ತಕಗಳನ್ನು ಖರೀದಿಸಿ ಓದುವ ಅಭ್ಯಾಸ ಬೆಳೆಸಿಕೊಳ್ಳುವುದರ ಜೊತೆಗೆ ಗ್ರಂಥಾಲಯದ ಪುಸ್ತಕಗಳನ್ನು ಬಳಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ದೇವದುರ್ಗ ವಿಸ್ತರಣ ಕೇಂದ್ರದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ.ಗೋವರ್ಧನ್ ಎಸ್.ಎ. ಮಾತನಾಡಿ, ಯುಜಿಸಿ ನಿಯಮಾವಳಿಗಳ ಪ್ರಕಾರ ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದ ಅರ್ಹತೆಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ನೆಟ್ ಪರೀಕ್ಷೆಯ ಮಹತ್ವ ಅರಿತು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಮುಭಾರಕ್ ಅವರು ಸಂಶೋಧನಾ ಅಭಿಕ್ಷಮತೆ ವಿಷಯದಲ್ಲಿ ಕೆ-ಸೆಟ್ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಲು ಅನುಸರಿಸಬೇಕಾದ ಸಿದ್ಧತಾ ಕ್ರಮಗಳು ಹಾಗೂ ಮೊದಲ ಪತ್ರಿಕೆಯ ಇಂಗ್ಲಿಷ್ ಪ್ರಶ್ನೆಗಳನ್ನು ಸುಲಭವಾಗಿ ಎದುರಿಸುವ ವಿಧಾನಗಳನ್ನು ತಿಳಿಸಿದರು.
ಪ್ರಾಧ್ಯಾಪಕ ಕಿರಣ್ ಕುಮಾರ್ ಅವರು ಸಂವಹನ, ನರಸಿಂಹಮೂರ್ತಿ ಅವರು ಉನ್ನತ ಶಿಕ್ಷಣ, ನಾಗರಾಜ ಜೆ. ಅವರು ದತ್ತಾಂಶ ವ್ಯಾಖ್ಯಾನ ಹಾಗೂ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ವೇಳೆ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಮಲ್ಲಯ್ಯ ಸ್ವಾಗತಿಸಿ ವಂದಿಸಿದರು.






