Ballari | ಸೋಮಲಾಪುರ ಕಾಯ್ದಿಟ್ಟ ಅರಣ್ಯವನ್ನು ಖರಾಬು ಜಮೀನಾಗಿ ಪರಿವರ್ತಿಸಲಾಗಿದೆ ಎಂಬ ವರದಿ ನಿರಾಧಾರ: ಅಧಿಕಾರಿಗಳ ಸ್ಪಷ್ಟನೆ

ಸಂಡೂರು/ಬಳ್ಳಾರಿ: ಸೋಮಲಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಖರಾಬು ಜಮೀನಾಗಿ ಪರಿವರ್ತಿಸಿದ್ದಾರೆ ಎಂಬ ವರದಿಯು ಸಂಪೂರ್ಣ ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತ ರಾಜೇಶ್ ಹಾಗೂ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್., ಐಎಫ್‌ಎಸ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸೋಮಲಾಪುರ ಕಾಯ್ದಿಟ್ಟ ಅರಣ್ಯವನ್ನು ನೋಟಿಫಿಕೇಷನ್ ಸಂಖ್ಯೆ 226ರ ಅನ್ವಯ 18.04.1890ರಂದು ಕಾಯ್ದಿಟ್ಟ ಅರಣ್ಯವೆಂದು ಘೋಷಿಸಲಾಗಿದ್ದು, ಒಟ್ಟು 2,393.88 ಎಕರೆ (968.77 ಹೆಕ್ಟೇರ್) ವಿಸ್ತೀರ್ಣ ಹೊಂದಿದೆ ಎಂದು ತಿಳಿಸಿದ್ದಾರೆ.
ಸೋಮಲಾಪುರ ಕಾಯ್ದಿಟ್ಟ ಅರಣ್ಯವು ಮೂರು ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ. ಈ ಪೈಕಿ ಸೋಮಲಾಪುರ ಗ್ರಾಮದ ಸರ್ವೆ ನಂಬರ್ 177/ಎ, 165/2, 165/ಎ, 165/ಬಿ ಸೇರಿದಂತೆ ಒಟ್ಟು 1,096.79 ಎಕರೆ ಪ್ರದೇಶವೂ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶ ಇಂದಿಗೂ ಇಲಾಖೆಯ ವಶದಲ್ಲೇ :
ಸೋಮಲಾಪುರ ಗ್ರಾಮದ ಸರ್ವೆ ನಂಬರ್ 1, 165/ಎ, 165/ಬಿ ಮತ್ತು 177/ಎ ವ್ಯಾಪ್ತಿಯ 1,096.79 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಖರಾಬು ಜಮೀನಾಗಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಸದರಿ ಜಮೀನು ಪ್ರಸ್ತುತವೂ ಅರಣ್ಯ ಇಲಾಖೆಯ ವಶದಲ್ಲಿದ್ದು, ಕಾಯ್ದಿಟ್ಟ ಅರಣ್ಯವಾಗಿಯೇ ಮುಂದುವರಿದಿದೆ ಎಂದು ಸ್ಪಷ್ಟಪಡಿಸಲಾಗಿದೆ.
2024ರ ಜನವರಿ 2ರಂದು ಸಹಾಯಕ ಆಯುಕ್ತರು ಹಾಗೂ ಉಪವಿಭಾಗ ದಂಡಾಧಿಕಾರಿಗಳ ನ್ಯಾಯಾಲಯದಿಂದ ಸಂಡೂರು ತಾಲೂಕಿನ ವಿವಿಧ ಗ್ರಾಮಗಳ ಖರಾಬು ಜಮೀನುಗಳ ದಾಖಲೆಗಳ ನಿರ್ವಹಣೆ ಕುರಿತು ಸೂಚನೆ ನೀಡಲಾಗಿತ್ತು. ಪಹಣಿಯಲ್ಲಿ ಖರಾಬು ವಿಸ್ತೀರ್ಣ ಸರಿಯಾಗಿ ನಮೂದಾಗದೇ ಉಳಿದಿದ್ದ ಪ್ರಕರಣಗಳಲ್ಲಿ, ಹಳ್ಳ, ಪರಂಪೂಕು, ಗುಡ್ಡ, ಗಾಯಾಳು ಮತ್ತಿತರ ಖರಾಬು ವಿಸ್ತೀರ್ಣವನ್ನು ಪಹಣಿಯ ಕಾಲಂ 3ರ ಫೋಟ್ ಖರಾಬು ವಿಭಾಗದಲ್ಲಿ ದಾಖಲಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖರಾಬು ಜಮೀನುಗಳು ಮಂಜೂರಾಗುವ ಅಥವಾ ದುರುಪಯೋಗವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಸೋಮಲಾಪುರ ಗ್ರಾಮದ ಸಂಬಂಧಿಸಿದ ಸರ್ವೆ ನಂಬರ್‌ಗಳಲ್ಲಿಯೂ ದಾಖಲೆಗಳನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಆರ್‌ಎಫ್’ ನಮೂದು ಮುಂದುವರಿಕೆ :
ಸೋಮಲಾಪುರ ಗ್ರಾಮದ ಸರ್ವೆ ನಂಬರ್ 1, 165/ಎ, 165/ಬಿ ಹಾಗೂ 177/ಎಗಳಿಗೆ ಸಂಬಂಧಿಸಿದಂತೆ, ಮ್ಯೂಟೇಷನ್ ಪ್ರತಿಯಲ್ಲಿನ ಸ್ವಾಧೀನತೆಯ ಕಾಲಂನಲ್ಲಿ ಹಿಂದೆ ಇದ್ದಂತೆ ‘ಆರ್‌ಎಫ್–ಕಾಯ್ದಿಟ್ಟ ಅರಣ್ಯ/ರಿಸರ್ವ್ ಫಾರೆಸ್ಟ್/ಅಡವಿ’ ಎಂಬ ನಮೂದನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಬದಲಾವಣೆ ಪ್ರಸ್ತುತ ಸಾಲಿನ ಪಹಣಿಯಲ್ಲಿ ಪ್ರತಿಬಿಂಬಿತವಾಗದಿರುವ ಹಿನ್ನೆಲೆಯಲ್ಲಿ, ಅರಣ್ಯ ಪ್ರದೇಶವನ್ನು ಕಂದಾಯ ದಾಖಲೆಗಳಲ್ಲಿ ಸಮರ್ಪಕವಾಗಿ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
92 ಸರ್ವೆ ನಂಬರ್‌ಗಳ ದಾಖಲೀಕರಣಕ್ಕೆ ಕ್ರಮ :
ಈ ಸಂಬಂಧ 09.03.2026 ಹಾಗೂ 21.05.2026ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬಳ್ಳಾರಿ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ಅಧಿಸೂಚಿತ ಅರಣ್ಯ ಪ್ರದೇಶಗಳಿಗೆ ಸೇರಿದ ಒಟ್ಟು 92 ಸರ್ವೆ ನಂಬರ್‌ಗಳ 23,800 ಎಕರೆ (9,637 ಹೆಕ್ಟೇರ್) ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮ್ಯೂಟೇಷನ್ ಮಾಡಲು ಕೋರಲಾಗಿದೆ.
ಇದರಲ್ಲಿ ಸೋಮಲಾಪುರ ಕಾಯ್ದಿಟ್ಟ ಅರಣ್ಯಕ್ಕೆ ಸೇರಿದ ನಾಲ್ಕು ಸರ್ವೆ ನಂಬರ್‌ಗಳೂ ಸೇರಿವೆ. ಈ ಮ್ಯೂಟೇಷನ್ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಸೋಮಲಾಪುರ ಕಾಯ್ದಿಟ್ಟ ಅರಣ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ರಿಕಾ ಪ್ರಕಟಣೆಯೊಂದಿಗೆ ಲಗತ್ತಿಸಲಾಗಿದ್ದು, ದಾಖಲೆಗಳ ಆಧಾರದಲ್ಲಿ ನೋಡಿದಾಗ ಟಿ.ವಿ.ಯಲ್ಲಿ ಪ್ರಸಾರವಾದ ವರದಿ ಸಂಪೂರ್ಣ ನಿರಾಧಾರವಾಗಿದೆ ಎಂದು ಸಹಾಯಕ ಆಯುಕ್ತ ರಾಜೇಶ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್., ಐಎಫ್‌ಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಸಂಘಟನೆಯ ಮೊದಲ ಆದ್ಯತೆ. ರೈತರ ಸಾಗುವಳಿ ಭೂಮಿಯನ್ನು ಉಳಿಸಿಕೊಳ್ಳಲು ನಾವು ನಿರಂತರ ಹೋರಾಟ ನಡೆಸುತ್ತಿದ್ದು, ಹಲವು ಸಂದರ್ಭಗಳಲ್ಲಿ ರೈತರ ಭೂಮಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಗಂಭೀರ ಪ್ರಕರಣ ಎದುರಾದರೂ ಕರ್ನಾಟಕ ರಾಜ್ಯ ರೈತ ಸಂಘ ಎಂದಿಗೂ ಮೌನವಾಗಿ ಕುಳಿತುಕೊಳ್ಳುವುದಿಲ್ಲ; ಅಗತ್ಯವಿದ್ದರೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಅದೇ ಸಂದರ್ಭದಲ್ಲಿ ‘ಅ’ ಖರಾಬು, ‘ಬಿ’ ಖರಾಬು ಸೇರಿದಂತೆ ಕಂದಾಯ ದಾಖಲೆಗಳಲ್ಲಿನ ತಾಂತ್ರಿಕ ಅಂಶಗಳಿಂದ ನೈಜವಾಗಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ತೊಂದರೆಯಾಗಬಾರದು. ರೈತರ ಹಿತದೃಷ್ಟಿಯಿಂದ ಕಂದಾಯ ಇಲಾಖೆ ಪ್ರಸ್ತುತ ನಿಯಮಾವಳಿಗಳನ್ನು ಮರುಪರಿಶೀಲಿಸಿ, ನೈಜ ಸಾಗುವಳಿದಾರ ರೈತರಿಗೆ ರಕ್ಷಣೆ ದೊರೆಯುವಂತಹ ಸ್ಪಷ್ಟ ಮತ್ತು ರೈತಪರ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ. ದಾಖಲೆಗಳಲ್ಲಿನ ಗೊಂದಲದಿಂದ ರೈತರ ಬದುಕು ಅತಂತ್ರವಾಗದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.”
-ನಾಯ್ಡು ಎಂ.ಎಲ್.ಕೆ., ಬಳ್ಳಾರಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ






