Sandur | ಜೆಎಸ್‌ಡಬ್ಲ್ಯೂ ಫೌಂಡೇಶನ್ ಕೌಶಲ್ಯ ತರಬೇತಿ : 66 ಮಂದಿಗೆ ಉದ್ಯೋಗ

ಸಂಡೂರು : ತಾಲೂಕಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜೆಎಸ್‌ಡಬ್ಲ್ಯೂ ಫೌಂಡೇಶನ್ ವತಿಯಿಂದ ಗ್ರಾಮೀಣ ಯುವಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯುತ್ ತಂತ್ರಜ್ಞ ತರಬೇತಿ ಕಾರ್ಯಕ್ರಮದ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಕಳೆದ ಡಿಸೆಂಬರ್‌ನಲ್ಲಿ ಆರಂಭಗೊಂಡ ಈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವು ಮೂರು ತಿಂಗಳ ಕಾಲ ನಡೆದಿದ್ದು, ಗ್ರಾಮೀಣ ಯುವಕರಿಗೆ ತಾಂತ್ರಿಕ ಜ್ಞಾನ, ಕೈಗಾರಿಕಾ ಕೌಶಲ್ಯ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಮ್, “ಗ್ರಾಮೀಣ ಯುವಕರಿಗೆ ಗುಣಮಟ್ಟದ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುತ್ತಿರುವ ಜೆಎಸ್‌ಡಬ್ಲ್ಯೂ ಫೌಂಡೇಶನ್ ಕಾರ್ಯ ಶ್ಲಾಘನೀಯ,” ಎಂದು ಹೇಳಿದರು.
ಜೆಎಸ್‌ಡಬ್ಲ್ಯೂ ಫೌಂಡೇಶನ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬಿಡಾಲ ಮಾತನಾಡಿ, “120 ವಿದ್ಯಾರ್ಥಿಗಳು ತರಬೇತಿ ಪಡೆದು ಪ್ರಮಾಣಪತ್ರ ಪಡೆದಿದ್ದು, ಅವರಲ್ಲಿ 66 ಮಂದಿಗೆ ಷ್ನೈಡರ್ ಎಲೆಕ್ಟ್ರಿಕ್, ಟೊಯೋಟಾ ಹಾಗೂ ಸ್ಟೋರ್ ಕ್ರಾಫ್ಟ್ ಸಂಸ್ಥೆಗಳಲ್ಲಿ ಉದ್ಯೋಗ ದೊರೆತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರಾಸರಿ 18 ಸಾವಿರ ರೂ. ವೇತನ ಸಿಗುತ್ತಿದೆ,” ಎಂದು ಮಾಹಿತಿ ನೀಡಿದರು.
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಯೂರೇಶ್ ಬಾಪತ್ ಮಾತನಾಡಿ, “ಯುವಕರಲ್ಲಿ ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಮೂಲಕ ಕೈಗಾರಿಕೆಗಳಿಗೆ ಅಗತ್ಯವಿರುವ ಪರಿಣತ ಮಾನವ ಸಂಪನ್ಮೂಲ ಸಿದ್ಧಗೊಳಿಸಲಾಗುತ್ತಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಎನರ್ಜಿ ಲಿಮಿಟೆಡ್ ಸಂಸ್ಥೆಯ ಶ್ರೀಕಾಂತ ಹೆಗಡೆ, ಸಿಎಸ್‌ಆರ್ ವಿಭಾಗದ ಶ್ರೇಷ್ಠ, ಗ್ರಾಮ ವಿಕಾಸ ಸೊಸೈಟಿಯ ಸಚಿನ್ ಅಳವಟಗಿ, ಕಾಲೇಜಿನ ಆಡಳಿತಾಧಿಕಾರಿ ಶಾಂತಪ್ಪ ಎಚ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.






