ಸಂಡೂರು | ಕ್ರೌಂಚಗಿರಿ ಕುಮಾರಸ್ವಾಮಿ ಮಹಾಜಾತ್ರೆ ಸಂಪನ್ನ: ಸಾವಿರಾರು ಭಕ್ತರಿಂದ ದರ್ಶನ

ಸಂಡೂರು: ತಾಲ್ಲೂಕಿನ ಐತಿಹಾಸಿಕ ಕ್ರೌಂಚಗಿರಿ ಬೆಟ್ಟದ ಶ್ರೀ ಕುಮಾರಸ್ವಾಮಿ ದೇವಸ್ಥಾನದ ವಾರ್ಷಿಕ ಮಹಾಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.
ಜಾತ್ರೆಯ ಪ್ರಮುಖ ಧಾರ್ಮಿಕ ವಿಧಿಯ ಅಂಗವಾಗಿ ಮಂಗಳವಾರ ಸಂಜೆ 6.40ಕ್ಕೆ ಸಂಡೂರು ರಾಜಮನೆತನದ ಘೋರ್ಪಡೆ ವಂಶಸ್ಥರಾದ ಬ್ಯಾಹರ್ಜಿ ಹಾಗೂ ಅವರ ಕುಟುಂಬಸ್ಥರು ದೇವಸ್ಥಾನದ ಗೋಪುರದ ಮೇಲೆ ಸಾಂಪ್ರದಾಯಿಕವಾಗಿ ಧ್ವಜಾರೋಹಣ ನೆರವೇರಿಸಿದರು. ಜಾತ್ರೆಯ ಅಂಗವಾಗಿ ಇಡೀ ದೇಗುಲವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸಂಸದ ಈ. ತುಕಾರಾಂ ಹಾಗೂ ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರದ ಜನರ ಸುಭಿಕ್ಷೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಜಯನಗರ, ಕೊಪ್ಪಳ, ಧಾರವಾಡ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹಾವೇರಿಯ ಬಂಡಿಗಣಿ ಮಠದ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ ಅವರ ಸಾನ್ನಿಧ್ಯದಲ್ಲಿ ಮಠದ ಟ್ರಸ್ಟ್ ಸಮಿತಿ ವತಿಯಿಂದ ಭಕ್ತರಿಗೆ ಉಚಿತ ಅನ್ನಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. “ವರ್ಷದ 365 ದಿನಗಳೂ ಮಠದಿಂದ ಪ್ರಸಾದ ವ್ಯವಸ್ಥೆ ಇರುತ್ತದೆ. ಜಾತ್ರೆಯ ವಿಶೇಷ ದಿನದಂದು 282 ಕಡೆಗಳಲ್ಲಿ ಅನ್ನದಾಸೋಹ ನಡೆಸಲಾಗುತ್ತಿದ್ದು, ಇಲ್ಲಿಯೂ ಸುಮಾರು 500 ಸ್ವಯಂಸೇವಕರು ಭಕ್ತರ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ” ಎಂದು ಟ್ರಸ್ಟ್ ಪ್ರತಿನಿಧಿಗಳು ತಿಳಿಸಿದರು.






