Sandur | ಕುಮಾರಸ್ವಾಮಿ ಜಾತ್ರೆ: ನ. 23ರಿಂದ 26ರವರೆಗೆ ಅದಿರು ಸಾಗಣೆ ಲಾರಿಗಳ ಸಂಚಾರ ನಿಷೇಧ

ಸಂಡೂರು: ಐದು ವರ್ಷಗಳಲ್ಲಿ ಎರಡು ಬಾರಿ ನಡೆಯುವ ಇಲ್ಲಿನ ಐತಿಹಾಸಿಕ ಶ್ರೀ ಕುಮಾರಸ್ವಾಮಿ ಜಾತ್ರಾ ಮಹೋತ್ಸವವನ್ನು ಸುಗಮವಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಸಾರಿಗೆ, ಭದ್ರತೆ, ಆರೋಗ್ಯ ಮತ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಜಾತ್ರೆಯ ಪೂರ್ವಸಿದ್ಧತೆ ಕುರಿತು ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ನೂತನ ತಹಶೀಲ್ದಾರ್ ತಿರುಪತಿ ಪಾಟೀಲ್, ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ನವೆಂಬರ್ 23ರಿಂದ 26ರವರೆಗೆ ಸಂಡೂರಿನಿಂದ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಅದಿರು ಸಾಗಣೆ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೂ ಮುನ್ನ ನವೆಂಬರ್ 17ರಂದು ಸ್ಮಯೋರ್ ಕಂಪನಿಯ ಸತ್ಯಾಲಯ ಸಭಾಂಗಣದಲ್ಲಿ ಸಂಸದ ಇ. ತುಕಾರಾಮ್ ಹಾಗೂ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಲಾಗಿತ್ತು.
ಭಕ್ತರ ಅನುಕೂಲಕ್ಕಾಗಿ ಸಂಡೂರು ಬಸ್ ನಿಲ್ದಾಣದಲ್ಲಿ ನಿಯಂತ್ರಣ ಕೊಠಡಿ ಹಾಗೂ ಸಹಾಯವಾಣಿ ತೆರೆಯಲಾಗುವುದು. ದೇವಸ್ಥಾನಕ್ಕೆ ಹೆಚ್ಚುವರಿ ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬಸ್‌ಗಳಲ್ಲಿ ನಿಗದಿತ 52 ಆಸನಗಳಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಬಾರದು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿನ ಗುಂಡಿಗಳನ್ನು ನವೆಂಬರ್ 22ರೊಳಗೆ ಮುಚ್ಚುವಂತೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಜಾತ್ರೆಯಲ್ಲಿ ಕಳ್ಳತನ ಹಾಗೂ ಸರಗಳ್ಳತನ ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸ್ ಬಂದೋಬಸ್ತ್ ಜೊತೆಗೆ ಸಂಡೂರು ರಾಜಮನೆತನದ ಯುವರಾಜರ ಕಂಪನಿಯಿಂದ 600 ಸಿಬ್ಬಂದಿಯನ್ನು ಭಕ್ತರ ಮಾರ್ಗದರ್ಶನಕ್ಕಾಗಿ ನಿಯೋಜಿಸಲಾಗುತ್ತಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಸೀನಿಬಸಪ್ಪ ಕ್ಯಾಂಪ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕುಡಿಯುವ ನೀರು, ಮೊಬೈಲ್ ಶೌಚಾಲಯ ಹಾಗೂ ಸ್ವಚ್ಛತೆಗಾಗಿ ಪುರಸಭೆ ಕ್ರಮ ಕೈಗೊಳ್ಳಲಿದೆ. ಮೊಬೈಲ್ ಆಂಬುಲೆನ್ಸ್ ಮತ್ತು ಅಗತ್ಯ ಔಷಧಗಳ ವ್ಯವಸ್ಥೆ ಮಾಡುವಂತೆ ಆರೋಗ್ಯ ಹಾಗೂ ಆಯುಷ್ ಇಲಾಖೆಗೆ ಸೂಚಿಸಲಾಗಿದೆ. ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿರುವುದನ್ನು ಆಹಾರ ನಿರೀಕ್ಷಕರು ಹಾಗೂ ಪುರಸಭೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಜಾತ್ರೆಯ ಮಾರ್ಗದಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವುದು, ಧೂಳು ನಿಯಂತ್ರಣ, ವಿದ್ಯುತ್ ಸುರಕ್ಷತೆ ಹಾಗೂ ಪಟಾಕಿ ಸಿಡಿಸುವ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ. ಜಾತ್ರೆಯ ವೇಳೆ ರಾಜಮನೆತನದ ಮಹಾರಾಜರ ಬ್ಯಾನರ್‌ಗಳನ್ನು ಹೊರತುಪಡಿಸಿ, ರಾಜಕೀಯ ನಾಯಕರ ಬ್ಯಾನರ್‌ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ.
ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.






