ಸಂಡೂರು | ಪ್ರಜಾಸೇವಾ ಆಂದೋಲನ ಸಭೆ
ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕಿ ಅನ್ನಪೂರ್ಣ ತುಕಾರಾಮ್

ಸಂಡೂರು: ತಾಲೂಕಿನ ನಿಡುಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡುಗುರ್ತಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕಿ ಅನ್ನಪೂರ್ಣ ಈ. ತುಕಾರಾಮ್, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಮುಕ್ತವಾಗಿ ಅಧಿಕಾರಿಗಳ ಗಮನಕ್ಕೆ ತಂದರೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ರೈತರು ಕಡಿಮೆ ನೀರು ಬೇಡುವ ಬೆಳೆಗಳಿಗೆ ಆದ್ಯತೆ ನೀಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಪಡೆದ ರೈತರು ಕೂಡ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ತಕ್ಷಣ ಸ್ಪಂದನೆ :
ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್ಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಶಾಸಕಿ, ಸಾರಿಗೆ ಇಲಾಖೆಯ ಅಧಿಕಾರಿ ಲಕ್ಷ್ಮಣ್ ಅವರಿಗೆ ದೂರವಾಣಿ ಕರೆ ಮಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಸಮಯದಲ್ಲಿ ಬಸ್ ಸಂಚರಿಸಲು ವ್ಯವಸ್ಥೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನೂರುದ್ದೀನ್ ಎಸ್., ಪ್ರಭಾರ ತಾಪಂ ಇಒ ರೇಣುಕಾಚಾರ್ಯ ಬಿ.ಎಂ., ಪ್ರಭಾರ ತಹಶೀಲ್ದಾರ್ ಸುಧಾ ಅರಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






