Sandur | ಗಣಿಗಾರಿಕೆಯಲ್ಲಿ ಉತ್ಪಾದನೆಯಷ್ಟೇ ಕಾರ್ಮಿಕರ ಸುರಕ್ಷತೆಗೂ ಆದ್ಯತೆ ನೀಡಿ: ಬ್ಯಾಹರ್ಜಿ ಎ.ಘೋರ್ಪಡೆ
58ನೇ ಗಣಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

ಸಂಡೂರು: ಗಣಿಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆಯ ದಾಖಲೆಗಳ ಜೊತೆಗೆ ಕಾರ್ಮಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಶೂನ್ಯ ಸಾವು ಗುರಿ ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಲಿಮಿಟೆಡ್ ಅಧ್ಯಕ್ಷ ಬ್ಯಾಹರ್ಜಿ ಎ. ಘೋರ್ಪಡೆ ಹೇಳಿದರು.
ಪಟ್ಟಣದ ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ ಲಿಮಿಟೆಡ್ನಲ್ಲಿ ಗಣಿ ಸುರಕ್ಷತಾ ನಿರ್ದೇಶನಾಲಯ ಮತ್ತು ಕರ್ನಾಟಕ ಗಣಿ ಸುರಕ್ಷತಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 58ನೇ ಗಣಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2024–25ನೇ ಸಾಲಿನಲ್ಲಿ ದೇಶದ ಗಣಿಗಾರಿಕೆ ಕ್ಷೇತ್ರ ಶೇ. 4.3ರಷ್ಟು ಬೆಳವಣಿಗೆ ದಾಖಲಿಸಿದ್ದು, 289 ಮಿಲಿಯನ್ ಟನ್ ಅದಿರು ಉತ್ಪಾದಿಸಿದೆ. ಮ್ಯಾಂಗನೀಸ್ ಉತ್ಪಾದನೆಯೂ ಶೇ. 11.8ರಷ್ಟು ಹೆಚ್ಚಳವಾಗಿ 3.8 ಮಿಲಿಯನ್ ಟನ್ ತಲುಪಿದೆ. ಆದರೆ, ಗಣಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳು ಮತ್ತು ಸಾವುಗಳು ಕಳವಳಕಾರಿಯಾಗಿವೆ. ಸುರಕ್ಷತೆಯನ್ನು ಕೇವಲ ವಾರ್ಷಿಕ ಆಚರಣೆಗೆ ಸೀಮಿತಗೊಳಿಸದೆ, ನಿತ್ಯದ ಕಾರ್ಯಶಿಸ್ತಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಣಿ ಸುರಕ್ಷತಾ ನಿರ್ದೇಶನಾಲಯದ ದಕ್ಷಿಣ ವಲಯದ ಉಪ ಮಹಾನಿರ್ದೇಶಕ ಸೈಫುಲ್ಲಾ ಅನ್ಸಾರಿ ಮಾತನಾಡಿ, ಮಾನವ ದೋಷ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ವಿಶೇಷವಾಗಿ ಭಾರಿ ಯಂತ್ರೋಪಕರಣಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಚಾಲಕರಿಗೆ ಸಿಮ್ಯುಲೇಟರ್ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಗಣಿಗಳ ಭೌಗೋಳಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಗಣಿ ಮಾಲೀಕರು ಸುರಕ್ಷತೆಗೆ ಅಗತ್ಯ ಅನುದಾನ ಮೀಸಲಿಡಬೇಕು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಗಣಿ ಕಾರ್ಮಿಕರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪ್ರಮುಖರಾದ ಆರ್.ಪ್ರವೀಣ್ ಚಂದ್ರ ಹಾಗೂ ಕೃಷ್ಣೇಂದು ಮಂಡಲ್ ಗಣಿ ಸುರಕ್ಷತೆಯ ಕುರಿತು ಮಾತನಾಡಿದರು. ಬಲ್ಡೋಟಾ ಕಂಪನಿಯ ಕೆ.ಮಧುಸೂದನ್, ಪಾರ್ಥೀಪನ್ ಪಿ. ಸೇರಿದಂತೆ ವಿವಿಧ ಗಣಿ ಕಂಪನಿಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.






