Sandur | ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಸಮಗ್ರ ಕೃಷಿ ಅಳವಡಿಸಿಕೊಳ್ಳಿ: ದುರ್ಗಪ್ಪ

ಸಂಡೂರು: ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ, ನೈಸರ್ಗಿಕ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಬೇಕು ಎಂದು ಪ್ರಗತಿಪರ ರೈತ ದುರ್ಗಪ್ಪ ಸಲಹೆ ನೀಡಿದರು.
ತಾಲೂಕಿನ ಬಂಡ್ರಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆ, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಗ್ರಾಮ ಪಂಚಾಯಿತಿ ಹಾಗೂ ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜೀವಾಮೃತ, ಪಂಚಗವ್ಯ ತಯಾರಿಕೆ, ಎರೆಹುಳು ತೊಟ್ಟಿ ಹಾಗೂ ಗೊಬ್ಬರ ಗುಂಡಿ ನಿರ್ಮಾಣದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಪ್ರಗತಿಪರ ರೈತ ಬಸಪ್ಪ ಮಾತನಾಡಿ, ಏಕಬೆಳೆ ಪದ್ಧತಿಯನ್ನು ಬಿಟ್ಟು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಉದಯಕುಮಾರ್ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಕಡಿಮೆ ನೀರು ಬಳಸಿ ಹಿಂಗಾರು ಬೆಳೆ ಬೆಳೆಯುವ ವಿಧಾನ ಹಾಗೂ ಈರುಳ್ಳಿ, ತೆಂಗು, ಮಾವು, ನಿಂಬೆ, ಬಾಳೆ, ದಾಳಿಂಬೆ ಮತ್ತು ಪಪ್ಪಾಯ ಬೆಳೆಗಳ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಜೀವನೋಪಾಯ ವ್ಯವಸ್ಥಾಪಕ ರವಿಚಂದ್ರ, ವಲಯ ಮೇಲ್ವಿಚಾರಕ ರುದ್ರೇಶ್, ಕೃಷಿ ಸಖಿಯರು, ಪಶು ಸಖಿಯರು, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ಗ್ರಾಮದ ರೈತರು ಭಾಗವಹಿಸಿದ್ದರು.






