Sandur | ಅಣಬೆ ಕೃಷಿಯಿಂದ ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಲು ಸಾಧ್ಯ: ರೇಣುಕಾಚಾರ್ಯ ಸ್ವಾಮಿ

ಸಂಡೂರು: ಅಣಬೆ ಕೃಷಿಯನ್ನು ಉದ್ಯಮವಾಗಿ ಕೈಗೆತ್ತಿಕೊಳ್ಳುವ ಮೂಲಕ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಉತ್ತಮ ಆದಾಯ ಗಳಿಸಬಹುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರೇಣುಕಾಚಾರ್ಯ ಸ್ವಾಮಿ ಹೇಳಿದರು.
ತಾಲ್ಲೂಕಿನ ಚೋರನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 35 ಮಹಿಳೆಯರಿಗಾಗಿ ಆಯೋಜಿಸಿದ್ದ 10 ದಿನಗಳ ಅಣಬೆ ಕೃಷಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತರಬೇತಿಯಲ್ಲಿ ಕಲಿತ ಕೌಶಲಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಗುಣಮಟ್ಟದ ಅಣಬೆ ಬೆಳೆಯಬೇಕು. ಜತೆಗೆ, ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಮುಂದಾಗಬೇಕು. ಸಂಜೀವಿನಿ ಯೋಜನೆಯಡಿ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನೆರವು ನೀಡಲಾಗುವುದು. ಅಲ್ಲದೆ, ‘ವಿಬಿಜಿ ರಾಮ್ ಜಿ’ (VBG RAM G) ಯೋಜನೆಯಡಿ ಅಣಬೆ ಕೃಷಿ ಶೆಡ್ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಂಜೀವಿನಿ ಗ್ರಾಮೀಣ ಜೀವನೋಪಾಯ ಅಭಿಯಾನ, ಚೋರನೂರು ಗ್ರಾಮ ಪಂಚಾಯಿತಿ, ನಿಸರ್ಗ ಸಂಜೀವಿನಿ ಒಕ್ಕೂಟ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಸಂಡೂರು ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ವಸಂತ ಕುಮಾರ್, ತಾಲ್ಲೂಕು ಯೋಜನಾಧಿಕಾರಿ ಹನುಮಗೌಡ, ಪಿಡಿಒ ಕರಿಬಸಪ್ಪ, ಒಕ್ಕೂಟದ ಅಧ್ಯಕ್ಷೆ ಸುನೀಲಮ್ಮ, ಬೋಧಕ ದಿನೇಶ್, ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ, ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.






