Sandur | ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಿ: ಮಲ್ಲಿಕಾರ್ಜುನ

ಸಂಡೂರು: ಅಭ್ಯರ್ಥಿಗಳು ಸ್ಥಳೀಯ ಮಿತಿಗೆ ಸೀಮಿತವಾಗದೆ, ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಜೆಎಸ್‌ಡಬ್ಲ್ಯು ಸ್ಟೀಲ್‌ನ ಕಾರ್ಪೊರೇಟ್ ಅಫೇರ್ಸ್ ವಿಭಾಗದ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ತೋರಣಗಲ್ಲಿನ ಜೆಎಸ್‌ಡಬ್ಲ್ಯುನಲ್ಲಿ ಆಯೋಜಿಸಿದ್ದ ‘ಸ್ಕಿಲ್ ಸ್ಪಾರ್ಕ್’ ಯೋಜನೆಯಡಿ 45 ದಿನಗಳ ಮೊಬೈಲ್ ಅಸೆಂಬ್ಲಿ ತರಬೇತಿ ಪೂರ್ಣಗೊಳಿಸಿದ 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿರಂತರ ಕಲಿಕೆ ಮತ್ತು ಸ್ಪಷ್ಟ ಗುರಿ ಇದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಜೆಎಸ್‌ಡಬ್ಲ್ಯು ಫೌಂಡೇಶನ್ ದಕ್ಷಿಣ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಮಾತನಾಡಿ, ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆ. ಪಡೆದ ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸಿಕೊಳ್ಳುವ ಮೂಲಕ ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಬೇತಿ ಪೂರ್ಣಗೊಳಿಸಿದವರ ಪೈಕಿ 42 ಯುವತಿಯರಿಗೆ ಬೆಂಗಳೂರು, ಹೊಸಪೇಟೆ ಹಾಗೂ ಬಳ್ಳಾರಿಯ ಫಾಕ್ಸ್‌ಕಾನ್, ಬ್ಯಾಂಕ್ ಆಫ್ ಬರೋಡಾ, ಮಹೀಂದ್ರಾ ಶೋರೂಂ, ಅಲ್ಟ್ರಾ ಪ್ರೈವೇಟ್ ಲಿಮಿಟೆಡ್ ಮತ್ತು ಲೈಫ್‌ಸ್ಟೈಲ್ ರಿಟೇಲ್ ಮಾರ್ಕೆಟ್ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ. ಈ ಯುವತಿಯರಿಗೆ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಮೊಬೈಲ್ ಬಿಡಿಭಾಗಗಳ ಗುರುತಿಸುವಿಕೆ, ಪಿಸಿಬಿ ಹಾಗೂ ಡಿಸ್‌ಪ್ಲೇ ಅಳವಡಿಕೆ, ಬ್ಯಾಟರಿ ಜೋಡಣೆ, ಗುಣಮಟ್ಟ ಪರೀಕ್ಷೆ ಮತ್ತು ತಾಂತ್ರಿಕ ದೋಷಗಳ ಪತ್ತೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಜೊತೆಗೆ ಚಿಲ್ಲರೆ ವ್ಯಾಪಾರ ನಿರ್ವಹಣೆ, ಗ್ರಾಹಕ ಸೇವೆ, ಬಿಲ್ಲಿಂಗ್, ಸಂವಹನ ಕೌಶಲ್ಯ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ಪ್ರಮಾಣೀಕರಣದ ಮೂಲಕ ಡಿಜಿಟಲ್ ತಂತ್ರಜ್ಞಾನದ ಪರಿಚಯ ಮಾಡಿಸಲಾಗಿದೆ.
ಈ ಸಂದರ್ಭದಲ್ಲಿ ವಿಜಯನಗರ ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಸಿಎಸ್‌ಆರ್ ಮುಖ್ಯಸ್ಥೆ ಭಾರತಿ ಪಳನಿಸ್ವಾಮಿ, ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಕೆ., ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಕೌಶಲ್ಯ ಮತ್ತು ಜೀವನೋಪಾಯ ವಿಭಾಗದ ಮುಖ್ಯಸ್ಥೆ ಶ್ರೇಷ್ಠಾ ಭಟ್ಟಾಚಾರ್ಜಿ, ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ರವಿ ತಳವಾರ್, ತರಬೇತುದಾರರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.






