ಬಳ್ಳಾರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ವೇಗ : ಶೇ.85.56 ಗಣತಿ ನಮೂನೆ ವಿತರಣೆ ಪೂರ್ಣ

ಬಳ್ಳಾರಿ, ಜು.8: ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಶೇ.85.56ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 12,29,586 ಮತದಾರರಿಗೆ ಅಗತ್ಯ ಗಣತಿ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ವಿತರಿಸಲಾಗಿದೆ. ಮತದಾರರ ಮ್ಯಾಪಿಂಗ್ ಕಾರ್ಯವೂ ಶೇ.97.83ರಷ್ಟು ಪೂರ್ಣಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 30ರಿಂದ ಆರಂಭಗೊಂಡಿರುವ ಮನೆ-ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ಜುಲೈ 29ರವರೆಗೆ ನಡೆಯಲಿದೆ. ಇದುವರೆಗೆ 10,55,044 (ಶೇ.85.56) ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, 1,73,142 (ಶೇ.14.08) ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜೊತೆಗೆ 1,348 ಮತದಾರರು ಸ್ವಯಂಪ್ರೇರಿತವಾಗಿ ಆನ್‌ಲೈನ್ ಮೂಲಕ ನಮೂನೆ ಸಲ್ಲಿಸಿದ್ದಾರೆ.
ಪರಿಷ್ಕರಣೆ ವೇಳೆ 1,626 ಮತದಾರರನ್ನು ವಿಶೇಷ ವರ್ಗದಡಿ ಗುರುತಿಸಲಾಗಿದ್ದು, ಇವರಲ್ಲಿ 808 ಮೃತರು, 593 ಶಾಶ್ವತವಾಗಿ ಸ್ಥಳಾಂತರಗೊಂಡವರು, 195 ಈಗಾಗಲೇ ನೋಂದಾಯಿತರಾಗಿರುವವರು, 11 ಗೈರುಹಾಜರು ಅಥವಾ ಪತ್ತೆಯಾಗದವರು ಹಾಗೂ 19 ಇತರ ಪ್ರಕರಣಗಳಾಗಿವೆ.
ವಿಧಾನಸಭಾವಾರು ಪ್ರಗತಿಯಂತೆ ಕಂಪ್ಲಿ ಕ್ಷೇತ್ರದಲ್ಲಿ 2,18,984, ಸಿರುಗುಪ್ಪದಲ್ಲಿ 2,20,893, ಬಳ್ಳಾರಿ ಗ್ರಾಮೀಣದಲ್ಲಿ 2,01,240, ಬಳ್ಳಾರಿ ನಗರದಲ್ಲಿ 1,91,950 ಹಾಗೂ ಸಂಡೂರು ಕ್ಷೇತ್ರದಲ್ಲಿ 2,18,977 ಗಣತಿ ನಮೂನೆಗಳನ್ನು ವಿತರಿಸಲಾಗಿದೆ.
ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸುವ ಉದ್ದೇಶದಿಂದ ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮನವಿ ಮಾಡಿದ್ದಾರೆ.






