ಸಂಡೂರಿನಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ : ರಾಜಕೀಯ ಪಕ್ಷಗಳೊಂದಿಗೆ ಅಧಿಕಾರಿಗಳ ಸಭೆ

ಸಂಡೂರು/ಬಳ್ಳಾರಿ: 95 ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮತದಾರ ನೋಂದಣಿ ಅಧಿಕಾರಿ ಮತ್ತು ಸಹಾಯಕ ಮತದಾರ ನೋಂದಣಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕು ಕಚೇರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮತದಾರ ನೋಂದಣಿ ಅಧಿಕಾರಿ ಹಾಗೂ ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಿದಾನಂದ ಅವರು ಎಸ್‌ಐಆರ್ ಕಾರ್ಯದ ಕುರಿತು ಮಾಹಿತಿ ನೀಡಿದರು. ಸಹಾಯಕ ಮತದಾರ ನೋಂದಣಿ ಅಧಿಕಾರಿ ಹಾಗೂ ಸಂಡೂರು ತಹಶೀಲ್ದಾರ್ ಅನಿಲ್ ಕುಮಾರ್ ಜಿ ಅವರು ಪ್ರಗತಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲು ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಲಾಯಿತು.
2026ರ ಜೂನ್ 16ರ ವೇಳೆಗೆ 95 ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,174 ಮತದಾರರು ದಾಖಲಾಗಿದ್ದು, ಎಲ್ಲರಿಗೂ ವಿತರಿಸಲು ಅಗತ್ಯ ಗಣತಿ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜುಲೈ 8ರ ಮಧ್ಯಾಹ್ನ 2 ಗಂಟೆಯ ವರದಿ ಪ್ರಕಾರ, ಕ್ಷೇತ್ರದಲ್ಲಿ 2,22,221 ಗಣತಿ ನಮೂನೆಗಳು, ಅಂದರೆ ಶೇ.91.76ರಷ್ಟು ಮತದಾರರಿಗೆ ವಿತರಿಸಲಾಗಿದ್ದು, 66,923 ನಮೂನೆಗಳು (ಶೇ.27.63) ಡಿಜಿಟಲೀಕರಣಗೊಂಡಿವೆ.
ಪ್ರಕ್ರಿಯೆಯ ವೇಳೆ 550 ಮತದಾರರನ್ನು ಎಎಸ್‌ಡಿಡಿಒ ಎಂದು ಗುರುತಿಸಲಾಗಿದ್ದು, 235 ಮೃತ ಮತದಾರರು, 207 ಶಾಶ್ವತವಾಗಿ ಸ್ಥಳಾಂತರಗೊಂಡವರು, 102 ಈಗಾಗಲೇ ನೋಂದಣಿಯಾಗಿರುವವರು ಹಾಗೂ ಮೂವರು ಗೈರುಹಾಜರಾದ ಮತದಾರರ ಮಾಹಿತಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಲಹೆ-ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಎಲ್ಲಾ ಅರ್ಹ ಮತದಾರರು ಗಣತಿ ನಮೂನೆಗಳನ್ನು ಭರ್ತಿ ಮಾಡಿ ನಿಗದಿತ ಅವಧಿಯಲ್ಲಿ ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






