Siruguppa | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ : ಲಕ್ಷಾಂತರ ರೂ. ನಷ್ಟ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಫ್ರಿಜ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಬಿಜಿಲಿ ಸಣ್ಣ ಭಾಷಾ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಫ್ರಿಜ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಮನೆಯ ವಿವಿಧ ಕೊಠಡಿಗಳಿಗೆ ವ್ಯಾಪಿಸಿದೆ ಎನ್ನಲಾಗಿದೆ. ಬೆಂಕಿಯಿಂದ ಟಿ.ವಿ., ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು ಹಾಗೂ ವ್ಯಾಪಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಬಟ್ಟೆಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಜ್ವಾಲೆ ಹಾಗೂ ದಟ್ಟ ಹೊಗೆ ಕಂಡು ಆತಂಕಗೊಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸದಿದ್ದರೆ ಪಕ್ಕದ ಮನೆಗಳಿಗೂ ವ್ಯಾಪಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅವಘಡದಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಆಸ್ತಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಎಚ್. ಚಂದ್ರಣ್ಣ, ದೊಡ್ಡ ಲಿಂಗಪ್ಪ, ಮಂಜುನಾಥ, ಕೆ. ಸಂಗಯ್ಯ ಹಿರೇಮಠ, ಲಿಂಗರಾಜ ಕೆ. ಹಾಗೂ ಪುಲಿ ಶೇಖರ ಭಾಗವಹಿಸಿದ್ದರು.






