ಸಿರುಗುಪ್ಪ | ಜಾನಪದ ಸಾಹಿತ್ಯ ಜೀವನ ಮೌಲ್ಯಗಳ ಅಕ್ಷಯ ಪಾತ್ರೆ : ಸಿ.ಬಿ.ಚಿಲ್ಕರಾಗಿ

ಸಿರುಗುಪ್ಪ: ಜನಪದ ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಾಂಸ್ಕೃತಿಕ ಸಂರಕ್ಷಣೆ ಮತ್ತು ನೈತಿಕ ಶಿಕ್ಷಣದ ಪ್ರಬಲ ಮಾಧ್ಯಮವಾಗಿದೆ. ಆಧುನಿಕ ಜಗತ್ತಿನ ಜಂಜಾಟಗಳ ನಡುವೆ ಜನಪದ ಸಾಹಿತ್ಯವು ಮಾನವನಿಗೆ ಸಾತ್ವಿಕ ಪ್ರೇರಣೆ ನೀಡುತ್ತಿದೆ ಎಂದು ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿ.ಬಿ. ಚಿಲ್ಕರಾಗಿ ಹೇಳಿದರು.
ತಾಲ್ಲೂಕಿನ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಸಂಯುಕ್ತ ಕಾಲೇಜಿನಲ್ಲಿ ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಉಪನ್ಯಾಸ ನೀಡಿದ ಉಪನ್ಯಾಸಕ ಚಾಂದ್ ಬಾಷಾ ಅವರು, ಜಾನಪದ ಸಾಹಿತ್ಯವು ಸತ್ಯ, ಸಹನೆ, ವಿನಯ ಹಾಗೂ ಕುಟುಂಬ ಮೌಲ್ಯಗಳ ಅಕ್ಷಯ ಪಾತ್ರೆಯಾಗಿದೆ. ತಾಯಿ-ತವರು ಪ್ರೀತಿ ಮತ್ತು ಮಾನವೀಯತೆಯನ್ನು ಮೌಖಿಕ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬಂದಿರುವ ಈ ಸಾಹಿತ್ಯವು ಇಂದಿಗೂ ಬದುಕಿನ ದಾರಿದೀಪವಾಗಿದೆ ಎಂದರು.
ಜನಪದ ಸಾಹಿತ್ಯವು ಗಾದೆಗಳು, ಒಗಟುಗಳು, ಲಾಾವಣಿಗಳು ಹಾಗೂ ಬಯಲಾಟದಂತಹ ವಿಶಿಷ್ಟ ಪ್ರಕಾರಗಳ ಮೂಲಕ ಜೀವನದ ಕಠಿಣ ಪಾಠಗಳನ್ನು ಅತ್ಯಂತ ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ ಎಂದು ಅವರು ವಿವರಿಸಿದರು.
ಬಳ್ಳಾರಿಯ ಚಕೋರ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ತಿಪ್ಪೇರುದ್ರ ಸಂಡೂರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ವೈದ್ಯಾಧಿಕಾರಿ ಡಾ.ಟಿ.ಮೃತ್ಯುಂಜಯ ಸ್ವಾಮಿ ಅವರು ವಿಷಯದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕವಿ ಅಬ್ದುಲ್ ಹೈ ತೋರಣಗಲ್ಲು, ಉಪನ್ಯಾಸಕರಾದ ಬಕಾಡೆ ಪಂಪಾಪತಿ, ನೆನೆಕ್ಕಿ ಹೊನ್ನೂರ ಸ್ವಾಮಿ, ಪ್ರಾಚಾರ್ಯ ಎಚ್. ಜಿ. ವಿಶ್ವನಾಥ ಗೌಡ, ನಿವೃತ್ತ ಮುಖ್ಯ ಶಿಕ್ಷಕ ಜೆ. ರಾಣಿಪ್ಪ, ಬಸವರಾಜ್, ನಿತಿನ್, ಈರಣ್ಣ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







