Siruguppa | ಆರೋಗ್ಯ ಜಾಗೃತಿ ಕಾರ್ಯಕ್ರಮ
ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸದಿಂದ ಸಾಂಕ್ರಾಮಿಕ ರೋಗಗಳ ತಡೆ: ಮಹಮ್ಮದ್ ಖಾಸಿಂ

ಸಿರುಗುಪ್ಪ: ತಾಲೂಕಿನ ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಿ ಉಪಕೇಂದ್ರದ ಅಂಗನವಾಡಿ ಕೇಂದ್ರ ಸಂಖ್ಯೆ 4ರಲ್ಲಿ ಅಕ್ಟೋಬರ್ 15ರ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಮಾತನಾಡಿ, ಸಾಬೂನು ಮತ್ತು ನೀರಿನಿಂದ ಸರಿಯಾದ ರೀತಿಯಲ್ಲಿ ಕೈ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಕೈಗಳ ಮೂಲಕ ಹರಡುವ ಸೋಂಕುಗಳಿಂದ ರಕ್ಷಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಆಹಾರ ಸೇವಿಸುವ ಮೊದಲು, ಆಹಾರ ತಯಾರಿಸುವ ಮುನ್ನ, ಶೌಚಾಲಯ ಬಳಕೆಯ ನಂತರ, ಮಗುವಿಗೆ ಆಹಾರ ನೀಡುವ ಮೊದಲು ಹಾಗೂ ಕೊಳಕು ವಸ್ತುಗಳನ್ನು ಮುಟ್ಟಿದ ಬಳಿಕ ಸಾಬೂನಿನಿಂದ ಕೈ ತೊಳೆಯುವುದು ಅತ್ಯಗತ್ಯ. ಈ ಅಭ್ಯಾಸವು ಅತಿಸಾರ ಸೇರಿದಂತೆ ವಿವಿಧ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಬಳಿಕ ಕೈ ತೊಳೆಯಬೇಕಾದ ಸಂದರ್ಭಗಳು ಹಾಗೂ ಸರಿಯಾದ ರೀತಿಯಲ್ಲಿ ಕೈ ತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಗರ್ಭಿಣಿಯರು, ತಾಯಂದಿರು ಹಾಗೂ ಮಕ್ಕಳ ಪೋಷಕರಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಯಿತು.
ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ. ಸಾಬೂನಿನಿಂದ ಕೈ ತೊಳೆಯುವ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶೃತಿ, ಅಂಗನವಾಡಿ ಕಾರ್ಯಕರ್ತೆ ಸುವರ್ಣ, ಆಶಾ ಕಾರ್ಯಕರ್ತೆ ಈರಮ್ಮ, ಗರ್ಭಿಣಿಯರು, ಮಕ್ಕಳ ತಾಯಂದಿರು ಹಾಗೂ ಪೋಷಕರು ಉಪಸ್ಥಿತರಿದ್ದರು.






