Siruguppa | ಹಾವು ಕಚ್ಚಿದರೆ ಭಯಪಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ : ವಸಂತ ಕುಮಾರಿ

ಸಿರುಗುಪ್ಪ: ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಭಯಪಡಿಸದೆ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಜೀವ ಉಳಿಸಲು ಅತ್ಯಂತ ಮುಖ್ಯ ಎಂದು ವೈದ್ಯೆ ವಸಂತ ಕುಮಾರಿ ಹೇಳಿದರು.
ತಾಲೂಕಿನ ರಾವಿಹಾಳು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಜಿಲ್ಲಾ ಸರ್ವೇಕ್ಷಣ ಘಟಕ ಹಾಗೂ ಸಿರುಗುಪ್ಪ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾವು ಮತ್ತು ನಾಯಿ ಕಡಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಹಾವುಗಳು ವಿಷಪೂರಿತವಾಗಿರುವುದಿಲ್ಲ. ಕೆಲವೇ ಪ್ರಭೇದದ ಹಾವುಗಳು ಮಾತ್ರ ವಿಷಪೂರಿತವಾಗಿದ್ದು, ಹಾವು ಕಡಿತದ ನಂತರ ಭಯದಿಂದಲೂ ಕೆಲವರು ತೀವ್ರ ತೊಂದರೆಗೆ ಒಳಗಾಗುತ್ತಾರೆ. ಹಾವು ಕಡಿತದಿಂದ ರಕ್ತಸ್ರಾವ, ಕಚ್ಚಿದ ಸ್ಥಳದಲ್ಲಿ ಊತ, ಕೆಂಪು ಗುಳ್ಳೆಗಳು, ಗಂಟಲು ಒಣಗುವುದು, ಬಾಯಲ್ಲಿ ನೊರೆ, ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ಪ್ರಕರಣಗಳಲ್ಲಿ ಮೂತ್ರಪಿಂಡ ವೈಫಲ್ಯ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಹಾವು ಕಡಿತಕ್ಕೊಳಗಾದವರನ್ನು ವಿಶೇಷವಾಗಿ ಒಂದು ಗಂಟೆಯೊಳಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಮಾತನಾಡಿ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೋಳಿ ಗೂಡು, ಇಲಿಗಳ ಹಾವಳಿ, ಕಲ್ಲು, ಪೊದೆ, ಮುಳ್ಳು ಹಾಗೂ ಕಸಕಡ್ಡಿಗಳು ಇರುವ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾವು ಕಡಿತದ ನಂತರದ ಮೊದಲ ಒಂದು ಗಂಟೆಯನ್ನು ‘ಗೋಲ್ಡನ್ ಅವರ್’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದರೆ ಅಪಾಯವನ್ನು ತಗ್ಗಿಸಬಹುದು ಎಂದು ಹೇಳಿದರು.
ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆಯ ಲಕ್ಷಣಗಳು, ಈ ಕುರಿತು ಇರುವ ಮೂಢನಂಬಿಕೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ ನಂಜು ನಿರೋಧಕ ಲಸಿಕೆಗಳ ಕುರಿತು ಅವರು ಮಾಹಿತಿ ನೀಡಿದರು.
ಕ್ಷೇತ್ರ ರೋಗವಾಹಕ ಕೀಟಶಾಸ್ತ್ರಜ್ಞ ನವೀನ್ ಮಾತನಾಡಿ, ಹಾವು ಕಡಿತಕ್ಕೆ ನೀಡುವ ನಂಜು ನಿರೋಧಕ ಲಸಿಕೆ (ಎಎಸ್‌ವಿ) ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್ ಸೇವೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ವಿಡಿಯೊ ಪ್ರದರ್ಶನದ ಮೂಲಕ ಹಾವು ಕಡಿತದಿಂದ ರಕ್ಷಣೆ, ಪ್ರಥಮ ಚಿಕಿತ್ಸೆ ಹಾಗೂ ಎಎಸ್‌ವಿ ಲಸಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಖಾಜಾವಲಿ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳ ಉದ್ದೇಶವನ್ನು ವಿದ್ಯಾರ್ಥಿಗಳು ಅರಿತುಕೊಂಡು, ಪಡೆದ ಮಾಹಿತಿಯನ್ನು ಸಮಾಜದ ಇತರರಿಗೂ ತಲುಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಅಧಿಕಾರಿ ರಾಜಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕರಿಯಮ್ಮ ಮತ್ತು ನಾಗವೇಣಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.






