ಸಿರುಗುಪ್ಪ | ಅಕ್ರಮ ಪಡಿತರ ಅಕ್ಕಿ ಸಾಗಟ ಪತ್ತೆ: 12.25 ಕ್ವಿಂಟಲ್ ಅಕ್ಕಿ ಜಪ್ತಿ

ಸಿರುಗುಪ್ಪ : ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಡಿತರ) ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬೊಲೆರೊ ವಾಹನವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸಿರಿಗೇರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಸಿರಿಗೇರಿ ಸಮೀಪದ ಸಿದ್ದರಾಂಪುರದಿಂದ ಕರೂರು ಕಡೆಗೆ ಎಪಿ-39 ಟಿಎನ್-7384 ಸಂಖ್ಯೆಯ ಬೊಲೆರೊ ವಾಹನದಲ್ಲಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಗೂ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಧರ್ ವೈ. ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಲಾಯಿತು.
ವಾಹನ ಪರಿಶೀಲನೆ ವೇಳೆ ಸುಮಾರು 12.25 ಕ್ವಿಂಟಲ್ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಯಿತು. ಅಧಿಕಾರಿಗಳು 28,175 ರೂ. ಮೌಲ್ಯದ ಅಕ್ಕಿ ಹಾಗೂ ಸಾಗಣೆಗೆ ಬಳಸಿದ್ದ ಬೊಲೆರೊ ವಾಹನವನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ ಎಂಬ ಆರೋಪಿಯನ್ನು ಬಂಧಿಸಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಪಡಿತರ ಅಕ್ಕಿ ಸಾಗಣೆ ಜಾಲದ ಕುರಿತು ತನಿಖೆ ಮುಂದುವರಿದಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಆಹಾರ ಧಾನ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






