ಸಿರುಗುಪ್ಪ | ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ: ಎಂ.ಎಸ್.ಸಿದ್ದಪ್ಪ
ಮಕ್ಕಳ ದಿನಾಚರಣೆ, ವಿವಿಧ ರಾಷ್ಟ್ರನಾಯಕರ ಜಯಂತಿ ಕಾರ್ಯಕ್ರಮ

ಸಿರುಗುಪ್ಪ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಅವರ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದು ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬೆಸ್ಟ್ ಮಾಂಟೆಸ್ಸರಿ ಶಾಲೆಯಲ್ಲಿ ಬುಧವಾರ ಪಂಡಿತ್ ಜವಾಹರಲಾಲ್ ನೆಹರು ಜಯಂತಿ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ವಿವಿಧ ರಾಷ್ಟ್ರನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ, ಶಿಸ್ತು ಮತ್ತು ಸಂಸ್ಕಾರ ಕಲಿಸುವ ಮೂಲಕ ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕು. ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸಿದಾಗ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ನಿಗಮದ ಸದಸ್ಯ ಎಂ.ಎಚ್. ಮಲ್ಲಿಕಾರ್ಜುನ ಬಾಲಪ್ಪ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಉತ್ತಮ ಸಂಸ್ಕಾರ, ಶಿಸ್ತು ಮತ್ತು ದೇಶಪ್ರೇಮ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಜಾದ್, ಮಹರ್ಷಿ ವಾಲ್ಮೀಕಿ, ಕನಕದಾಸ ಹಾಗೂ ಟಿಪ್ಪು ಸುಲ್ತಾನ್ ಅವರ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳು ಚುಟುಕು ಭಾಷಣ, ರಾಷ್ಟ್ರನಾಯಕರ ವೇಷಭೂಷಣ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಫಸ್ಟ್ ಕರ್ನಾಟಕ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಕೊಟಗಿ, ಬೆಸ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಾಂದ್ ಬಾಷ, ಪಟ್ಟಣ ಪಂಚಾಯಿತಿ ಸದಸ್ಯ ನಸರುದ್ದೀನ್, ಹಿರಿಯ ಶಿಕ್ಷಕಿ ಆರ್. ಸುಧಾ, ಮುಖಂಡರಾದ ಶೇಕ್ ಸಾಬ್ ಮುಜಾವರ್, ಶಿಕ್ಷಕಿಯರಾದ ಶಾಂತಮ್ಮ, ಸಾಜಿದಾ, ಶಿಲ್ಪಾ ಎಚ್.ಕೆ., ಸಹನಾ, ಆಲಿಯಾ ಅಂಜುಂ, ಸನಾ ಕೌಸರ್, ನೂರ್ ಇ ಫಾತೀಮಾ, ಹೊನ್ನೂರ್ ಬೀ, ಮೆಹಬೂಬ್ ಬೀ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






