ಸಿರುಗುಪ್ಪ | ಸರಕಾರದ ಸಾಧನೆಗಳ 'ಛಾಯಾಚಿತ್ರ ವಸ್ತು ಪ್ರದರ್ಶನ'ಕ್ಕೆ ಚಾಲನೆ

ಸಿರುಗುಪ್ಪ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ "ವಿಶೇಷ ಛಾಯಾಚಿತ್ರ ವಸ್ತು ಪ್ರದರ್ಶನ"ಕ್ಕೆ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಶುಕ್ರವಾರ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪಟ್ಟಣದ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಎಸ್.ಸಿ.ಎಸ್.ಪಿ (SCSP), ಟಿ.ಎಸ್.ಪಿ (TSP) ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಸವಲತ್ತುಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಬಿ.ಎಂ. ಸತೀಶ್ ಮಾತನಾಡಿ, ರಾಜ್ಯ ಸರ್ಕಾರವು ಸಾರ್ವಜನಿಕರ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಈ ವಸ್ತು ಪ್ರದರ್ಶನವು ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ಜನರ ಗಮನಸೆಳೆದ ಸೆಲ್ಫಿ ಪಾಯಿಂಟ್ :
ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಈ ಪ್ರದರ್ಶನವು ಪ್ರಯಾಣಿಕರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಗೂ ಯೋಜನೆಗಳ ಕುರಿತಾದ ಆಕರ್ಷಕ ಫಲಕಗಳ ಮುಂದೆ ನಿಂತು ಜನರು ಉತ್ಸಾಹದಿಂದ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡುಬಂದಿತು. ಈ ಪ್ರದರ್ಶನವು ಜ.16 ರಿಂದ 18 ರವರೆಗೆ ಸಾರ್ವಜನಿಕರಿಗಾಗಿ ಮುಕ್ತವಾಗಿರುತ್ತದೆ.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಾರುತಿ ವರಪ್ರಸಾದ ರೆಡ್ಡಿ, ನಗರಸಭೆ ಪೌರಾಯುಕ್ತ ಗಂಗಾಧರ, ಕೆಕೆಆರ್ ಟಿಸಿ ವಿಭಾಗದ ಕೆ.ಎ. ಶೇಕ್ಷಾವಲಿ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.







